ದೆಹಲಿ ಗಢಗಢ; 58 ವರ್ಷಗಳಲ್ಲೇ ರಾಜಧಾನಿಯಲ್ಲಿ ದಾಖಲೆಯ ಕನಿಷ್ಠ ತಾಪಮಾನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ ಮತ್ತೆ ದಾಖಲೆ ಬರೆದಿದ್ದು, 58 ವರ್ಷಗಳಲ್ಲೇ ಈ ಅಕ್ಟೋಬರ್ ತಿಂಗಳಲ್ಲಿ ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ ಮತ್ತೆ ದಾಖಲೆ ಬರೆದಿದ್ದು, 58 ವರ್ಷಗಳಲ್ಲೇ ಈ ಅಕ್ಟೋಬರ್ ತಿಂಗಳಲ್ಲಿ ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.

ದೆಹಲಿಯಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಇದು 58 ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಇದಕ್ಕೂ ಮುನ್ನ 1962ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಸರಾಸರಿ ಕನಿಷ್ಠ ತಾಪಮಾನ 16.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 

1937ರ ಅ.31ರಂದು ದಿಲ್ಲಿಯಲ್ಲಿ ಇದುವರೆಗಿನ ಕನಿಷ್ಠ ತಾಪಮಾನ ದಾಖಲೆ ಎನ್ನಲಾಗಿರುವ 9.4 ಡಿಗ್ರಿ ಸೆಲ್ಸಿಯಸ್‌ ವರದಿಯಾಗಿತ್ತು. ಬಳಿಕ 1994ರಲ್ಲಿ 12.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಬಳಿಕ ಅಂಥಹ ಕನಿಷ್ಠ ತಾಪಮಾನ ದೆಹಲಿಯಲ್ಲಿ ದಾಖಲಾಗಿರಲಿಲ್ಲ. ಆದರೆ ಕಳೆದ ಗುರುವಾರ ನಗರದಲ್ಲಿನ  ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್‌ಗೆ ದಿಢೀರ್‌ ಕುಸಿತ ಕಂಡಿತ್ತು. ಡಿಸೆಂಬರ್‌ ಹೊತ್ತಿಗೆ ಮತ್ತಷ್ಟು ತಾಪಮಾನ ಇಳಿಕೆಯಿಂದಾಗಿ ಸ್ಥಳೀಯರಿಗೆ ಶೀತಗಾಳಿಯ ಪರಿಣಾಮ ಅನಾರೋಗ್ಯ ಹೆಚ್ಚುವ ಆತಂಕವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದಾರೆ. 

ಇನ್ನು ಶನಿವಾರ, ಗರಿಷ್ಠ ತಾಪಮಾನ 30.8 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಸಾಮಾನ್ಯ ಕನಿಷ್ಠ ತಾಪಮಾನ 15-16 ಡಿಗ್ರಿ ಸೆಲ್ಸಿಯಸ್ ಇದೆ ಎಂದು ಐಎಂಡಿ ತಿಳಿಸಿದೆ. ಶೀತ ತಾಪಮಾನ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ  ಹವಾಮಾನ ಇಲಾಖೆ (ಐಎಂಡಿ) ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್‌ ಶ್ರೀವಾಸ್ತವ ಅವರು, ಆಕಾಶದಲ್ಲಿ ಮೋಡಗಳ ದಟ್ಟವಾದ ಪದರ ಕಂಡುಬರುತ್ತಿಲ್ಲ. ಬದಲಾಗಿ ಮೋಡಗಳು ಛಿದ್ರಗೊಂಡಿರುವುದು ತಾಪಮಾನ ಗಣನೀಯವಾಗಿ ಇಳಿಕೆ ಕಾಣುತ್ತಿರುವುದಕ್ಕೆ ಪ್ರಮುಖ ಕಾರಣ. ತಣ್ಣನೆಯ ಗಾಳಿ ಬೀಸಿದಷ್ಟೂ  ಮಂಜು ಕವಿಯುವುದು ಹೆಚ್ಚುತ್ತಲಿದೆ. ದಟ್ಟ ಮೋಡಗಳು ಇನ್‌ಫ್ರಾರೆಡ್‌ ಕಿರಣಗಳು ಹಿಡಿದಿಟ್ಟು ಅವುಗಳನ್ನು ಭೂಮಿಗೆ ಕಳುಹಿಸುವ ಮೂಲಕ ಶಾಖದ ಏರಿಕೆಗೆ ಸಹಾಯಕವಾಗುತ್ತಿದ್ದವು ಎಂದಿದ್ದಾರೆ.

ಇನ್ನು ಮುಂದಿನ ಒಂದು ವಾರದಿಂದ 10 ದಿನಗಳ ಕಾಲ ದೆಹಲಿಯಲ್ಲಿ ಕನಿಷ್ಠ ತಾಪಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com