ವಾಸ್ತುಶಿಲ್ಪಿಯ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಮುಂಬೈ ಪೊಲೀಸರಿಂದ ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ

ಬುಧವಾರ ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಹಠಾತ್ ಬೆಳವಣಿಗೆಯಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪತ್ರಕರ್ತ ಅರ್ನಬ್ ಗೋಸ್ವಾಮಿ
ಪತ್ರಕರ್ತ ಅರ್ನಬ್ ಗೋಸ್ವಾಮಿ

ಮುಂಬೈ: ಬುಧವಾರ ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಹಠಾತ್ ಬೆಳವಣಿಗೆಯಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

53 ವರ್ಷದ ಇಂಟೀರಿಯರ್ ಡಿಸೈನರ್ ಅವರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿಯವರು ಪ್ರಚೋದನೆ ನೀಡಿರುವ ಆರೋಪದ ಮೇಲೆ ಮುಂಬೈ ಪೊಲೀಸರು ಅವರನ್ನು ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.

ಇಂದು ಬೆಳಗ್ಗೆ ಅರ್ನಬ್ ಗೋಸ್ವಾಮಿ ನಿವಾಸಕ್ಕೆ ಆಗಮಿಸಿದ ಪೊಲೀಸರು ಅವರನ್ನು ಬಂಧಿಸಲು ಮುಂದಾದರು. ಆಗ ಮಾತಿನ ಚಕಮಕಿ ನಡೆದಿದೆ, ಪೊಲೀಸರು ಗೋಸ್ವಾಮಿ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದೆ.

ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಪೊಲೀಸರು ಯತ್ನಿಸಿದರು. ಅಲ್ಲದೆ ತಮ್ಮ ಪತ್ನಿ, ಪುತ್ರ, ಅತ್ತೆ-ಮಾವಂದಿರ ಮೇಲೆ ಕೂಡ ಹಲ್ಲೆ ನಡೆಸಲು ಯತ್ನಿಸಿದರು. ರಿಪಬ್ಲಿಕ್ ಟಿವಿಯಲ್ಲಿ ಬರುತ್ತಿರುವ ವಿಡಿಯೊ ಪ್ರಸಾರದಲ್ಲಿ ಪೊಲೀಸರು ಅರ್ನಬ್ ಗೋಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಂತರ ಪೊಲೀಸ್ ವ್ಯಾನಿನಲ್ಲಿ ಅರ್ನಬ್ ಗೋಸ್ವಾಮಿಯವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಏನಿದು ಪ್ರಕರಣ: 2018ರ ಮೇ ತಿಂಗಳಲ್ಲಿ ಇಂಟೀರಿಯರ್ ಡಿಸೈನರ್ ಮತ್ತು ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು, ಅದರಲ್ಲಿ ಬಾಕಿ ಉಳಿದ ಹಣವನ್ನು ರಿಪಬ್ಲಿಕ್ ಟಿವಿ ಸಂಪಾದಕ ಗೋಸ್ವಾಮಿ ನೀಡುತ್ತಿಲ್ಲ, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದ್ದರು.

ವಾಸ್ತುಶಿಲ್ಪಿ ಅನ್ವಯ್ ನಾಯಕ್ ಅವರ ಪುತ್ರಿ ಅದ್ನಯ ನಾಯಕ್ ಅವರು ನೀಡಿರುವ ಹೊಸ ದೂರಿಗೆ ಸಂಬಂಧಪಟ್ಟಂತೆ ಪ್ರಕರಣದ ಮರು ತನಿಖೆ ಮಾಡಲಾಗುವುದು ಎಂದು ಕಳೆದ ಮೇಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಪ್ರಕಟಿಸಿದ್ದರು.

ಅರ್ನಬ್ ಮೇಲೆ ಈ ಹಿಂದೆ 2 ಕೇಸು: ಈ ಹಿಂದೆ ಅರ್ನಬ್ ಗೋಸ್ವಾಮಿ ಮೇಲೆ ಪ್ರಚೋದನಾಕಾರಿ ಹೇಳಿಕೆ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವಮಾನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕೇಸು ದಾಖಲಾಗಿತ್ತು. ಪಲ್ಗಾರ್ ಸಾಮೂಹಿಕ ಹತ್ಯೆ ಘಟನೆ ಮತ್ತು ಬಾಂದ್ರಾ ನಿಲ್ದಾಣದ ಜನದಟ್ಟಣೆ ಘಟನೆ ವರದಿಗೆ ಸಂಬಂಧಿಸಿದಂತೆ ಮುಂಬೈಯ ಎನ್ ಎಂ ಜೋಷಿ ಮಾರ್ಗ್ ಹಾಗೂ ಪೈದ್ಹೊನಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಸಂಪಾದಕರ ಮಂಡಳಿ ಖಂಡನೆ: ಅರ್ನಬ್ ಗೋಸ್ವಾಮಿ ಮೇಲಿನ ಹಲ್ಲೆ ಮತ್ತು ಬಂಧನವನ್ನು ಭಾರತೀಯ ಸಂಪಾದಕರ ಗಿಲ್ಡ್ ಖಂಡಿಸಿದ್ದು, ಈ ಪ್ರಕರಣದಲ್ಲಿ ಮುಕ್ತ ತನಿಖೆ ನಡೆಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಕೋರಿದೆ. ಮಾಧ್ಯಮಗಳು ವರದಿ ಮಾಡುವ ಸೂಕ್ಷ್ಮ ವರದಿಗಳ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಸರ್ಕಾರದ ಅಧಿಕಾರವನ್ನು ಬಳಸಬಾರದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com