ಆಂಧ್ರ ಪ್ರದೇಶ: ಶಾಲೆಗಳು ಆರಂಭವಾದ ಬಳಿಕ 262 ವಿದ್ಯಾರ್ಥಿಗಳು, 160 ಶಿಕ್ಷಕರಿಗೆ ಕೊರೋನಾ ಸೋಂಕು
ಆಂಧ್ರ ಪ್ರದೇಶದಲ್ಲಿ ಶಾಲೆಗಳು ಆರಂಭವಾದ ಬಳಿಕ ಕೊರೋನಾ ಸಾಂಕ್ರಾಮಿಕ ಶಾಕ್ ನೀಡಿದ್ದು, 262 ವಿದ್ಯಾರ್ಥಿಗಳು, 160 ಶಿಕ್ಷಕರಿಗೆ ಕೊರೋನಾ ಸೋಂಕು ಒಕ್ಕರಿಸಿದೆ.
Published: 05th November 2020 05:19 PM | Last Updated: 05th November 2020 05:21 PM | A+A A-

ಪಿಟಿಐ ಚಿತ್ರ
ಅಮರಾವತಿ: ಆಂಧ್ರಪ್ರದೇಶದಲ್ಲಿ ಶಾಲೆಗಳು ಆರಂಭವಾದ ಬಳಿಕ ಕೊರೋನಾ ಸಾಂಕ್ರಾಮಿಕ ಶಾಕ್ ನೀಡಿದ್ದು, 262 ವಿದ್ಯಾರ್ಥಿಗಳು, 160 ಶಿಕ್ಷಕರಿಗೆ ಕೊರೋನಾ ಸೋಂಕು ಒಕ್ಕರಿಸಿದೆ.
ನವೆಂಬರ್ 2ರಂದು ಆಂಧ್ರ ಪ್ರದೇಶ ಸರ್ಕಾರ 9 ಮತ್ತು 10 ತರಗತಿ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ತೆರೆಯಲಾಗಿತ್ತು. ಕೋವಿಡ್ ಮಾರ್ಗಸೂಚಿ ಅನ್ವಯವೇ ನಿಯಮಗಳನ್ನು ಪಾಲಿಸಿ ಶಾಲೆಗಳನ್ನು ಆರಂಭಿಸಲಾಗಿತ್ತು. ಪ್ರತೀ ಕೊಠಡಿಯಲ್ಲಿ ಗರಿಷ್ಠ 15 ರಿಂದ 16 ಮಕ್ಕಳನ್ನು ಮಾತ್ರ ಕೂರಿಸಲಾಗಿತ್ತು ಎಂದು ಸರ್ಕಾರ ಹೇಳಿದೆ. ಆದಾಗ್ಯೂ 262 ವಿದ್ಯಾರ್ಥಿಗಳು, 160 ಶಿಕ್ಷಕರಿಗೆ ಕೊರೋನಾ ಸೋಂಕು ಒಕ್ಕರಿಸಿದೆ.
ಈ ಬಗ್ಗೆ ಮಾತನಾಡಿರುವ ಶಾಲಾ ಶಿಕ್ಷಣ ಆಯುಕ್ತ ವಿ ಚಿನ್ನ ವೀರಭದ್ರುಡು ಅವರು, ಶಾಲಾ ವಿದ್ಯಾರ್ಥಿಗಳಿಗ ಕೊರೋನಾ ಸೋಂಕಿನ ಅಂಕಿ ಅಂಶ ಆತಂಕಕಾರಿಯಲ್ಲ. ಏಕೆಂದರೆ ಶಾಲೆಗಳು ಆರಂಭವಾದ ಬಳಿಕ ಶಾಲೆಗಳಿಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳ ಸಂಖ್ಯೆ ಶೇ.0.1ರಷ್ಟೂ ಇಲ್ಲ. ಶಾಲೆಗಳು ಆರಂಭವಾಗಿದ್ದರಿಂದಲೇ ವಿದ್ಯಾರ್ಥಿಗಳಿಗೆ ಸೋಂಕು ಬಂದಿದೆ ಎಂದು ಹೇಳುವುದು ತಪ್ಪು. ಸೋಂಕು ಶಾಲೆಯಿಂದಲ್ಲದೇ ಬೇರಾವುದೇ ಮಾರ್ಗದಿಂದಲೂ ಅವರಿಗೆ ಸೋಂಕಿರಬಹುದು. ಅಧಿಕಾರಿಗಳು ಒದಗಿಸಿದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 9 ಮತ್ತು 10 ನೇ ತರಗತಿಗೆ 9.75 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಅದರಲ್ಲಿ 3.93 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು, 1.11 ಲಕ್ಷ ಶಿಕ್ಷಕರಲ್ಲಿ, 99,000 ಸಾವಿರಕ್ಕೂ ಹೆಚ್ಚು ಮಂದಿ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ಹಾಜರಾಗಿದ್ದಾರೆ. ಈ 1.11 ಲಕ್ಷ ಶಿಕ್ಷಕರ ಪೈಕಿ 160 ಶಿಕ್ಷಕರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಆದರೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯವೇ ನಮಗೆ ಮುಖ್ಯ ಎಂದು ಹೇಳಿದ್ದಾರೆ.
ಶಾಲೆಗಳನ್ನು ತೆರೆಯದೇ ಇದ್ದಿದ್ದರೆ, ಆನ್ಲೈನ್ ತರಗತಿಗಳನ್ನು ಪಡೆಯಲು ಸಾಧ್ಯವಾಗದ ಬಡ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದ ಬಾಲಕಿಯರಿಗೆ ಇದು ತೊಂದರೆಯಾಗಿದೆ, ಏಕೆಂದರೆ ಹದಿಹರೆಯದವರು ಶಾಲೆಗಳಿಗೆ ಹೋಗುವುದನ್ನು ನಿಲ್ಲಿಸಿದರೆ ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗಬಹುದು ಎಂದು ಚಿನ್ನ ವೀರಭದ್ರುಡು ಆತಂಕ ವ್ಯಕ್ತಪಡಿಸಿದ್ದಾರೆ.