ಹೈದರಾಬಾದ್ ನಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ, ಕೊಲೆ; ದುಷ್ಕರ್ಮಿಗಳಿಗಾಗಿ ಪೊಲೀಸರ ತೀವ್ರ ಹುಡುಕಾಟ
ದಿಶಾ ಪ್ರಕರಣದ ಬಳಿಕ ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಅಂತಹುದೇ ಮತ್ತೊಂದು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
Published: 05th November 2020 03:03 PM | Last Updated: 05th November 2020 03:03 PM | A+A A-

ಸಾಂದರ್ಭಿಕ ಚಿತ್ರ
ಹೈದರಾಬಾದ್: ದಿಶಾ ಪ್ರಕರಣದ ಬಳಿಕ ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಅಂತಹುದೇ ಮತ್ತೊಂದು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಹೈದರಾಬಾದ್ ನ ಮಿಯಾಪುರದಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ. ಮಹಿಳೆಯನ್ನು ಕೊಲ್ಲೂರು ತಾಂಡಾದ ಮೂವರು ಪುರುಷರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಇಬ್ಬರು ಮಕ್ಕಳ ತಾಯಿಯಾಗಿರುವ ಕೊಲ್ಲೂರು ತಾಂಡಾದ ಮಹಿಳೆಯೊಬ್ಬರು ಗಂಡನ ಸಾವಿನ ಬಳಿಕ ಕೊಲ್ಲೂರ ಸಮೀಪದ ಆರ್ ಸಿ ಪುರಂ ಹೊರ ವಲಯದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೂರು ದಿನಗಳ ಹಿಂದೆ ಮಿಯಾಪುರದಲ್ಲಿರುವ ತಮ್ಮ ತಾಯಿಯ ಮನೆಗೆ ಮಹಿಳೆ ತೆರಳುತ್ತಿದ್ದಾಗ ಅದೇ ತಾಂಡಾದ ಮೂವರು ಪುರುಷರು ಆಕೆಯನ್ನು ಅಪಹರಣ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಗೆ ಬಲವಂತವಾಗಿ ಮಧ್ಯ ಸೇವಿಸುವಂತೆ ಮಾಡಿ ಬಳಿಕ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ.
ಮೂರು ದಿನಗಳ ಬಳಿಕ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ದಾರಿ ಹೋಕರು ಮಹಿಳೆ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಮೂವರು ದುಷ್ಕರ್ಮಿಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕಿದ್ದು ಅವರನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಹೈದರಾಬಾದ್ ನಲ್ಲಿ ಕೆಲ ತಿಂಗಳ ಹಿಂದೆ ನಡೆದಿದ್ದ ದಿಶಾ ಹತ್ಯಾಚಾರ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಪ್ರಕರಣದಲ್ಲಿ ಬಂಧಿತರಾಗಿದ್ದ ದುಷ್ಕರ್ಮಿಗಳು ಪೊಲೀಸ್ ಎನ್ ಕೌಂಟರ್ ನಲ್ಲಿ ಹತರಾಗಿದ್ದರು.