ಹಾಸನಾಂಬ ದರ್ಶನೋತ್ಸವಕ್ಕೆ ವಿದ್ಯುಕ್ತ ಚಾಲನೆ: ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ

ವರ್ಷಕ್ಕೆ ಒಮ್ಮೆ ಬಾಗಿಲು ತೆರೆಯುವ ಇತಿಹಾಸ ಪ್ರಸಿದ್ಧ ಅಧಿದೇವತೆ ಹಾಸನಾಂಬ ದೇವಾಲಯ ಗರ್ಭಗುಡಿ ಬಾಗಿಲನ್ನು ಧಾರ್ಮಿಕ ವಿಧಿ ವಿಧಾನಗಳ ಪೊಜೆ ನೆರವೇರಿಸುವ ಮೂಲಕ ಗುರುವಾರ ಮಧ್ಯಾಹ್ನ 12.17ಕ್ಕೆ ತೆರೆಯಲಾಯಿತು. 
ಹಾಸನಾಂಬ ದೇವಸ್ಥಾನ
ಹಾಸನಾಂಬ ದೇವಸ್ಥಾನ

ಹಾಸನ: ವರ್ಷಕ್ಕೆ ಒಮ್ಮೆ ಬಾಗಿಲು ತೆರೆಯುವ ಇತಿಹಾಸ ಪ್ರಸಿದ್ಧ ಅಧಿದೇವತೆ ಹಾಸನಾಂಬ ದೇವಾಲಯ ಗರ್ಭಗುಡಿ ಬಾಗಿಲನ್ನು ಧಾರ್ಮಿಕ ವಿಧಿ ವಿಧಾನಗಳ ಪೊಜೆ ನೆರವೇರಿಸುವ ಮೂಲಕ ಗುರುವಾರ ಮಧ್ಯಾಹ್ನ 12.17ಕ್ಕೆ ತೆರೆಯಲಾಯಿತು. 
ಅರಸು ವಂಶಸ್ಥರಾದ ನಂಜರಾಜ ಅವರು ಬಾಳೆ ಕಡಿದ ನಂತರ ಬಾಗಿಲು ತರೆಯಲಾಯಿತು. ಕಡಿದ ಬಾಳೆ ಕಂಬದ ಪಳೆಯುಳಿಕೆ ಪಡೆಯಲು‌ ಜನರು ಮುಗಿಬಿದ್ದರು.

ಕೊರೋನಾ ನಡುವೆ ಗಣ್ಯರು, ಅಧಿಕಾರಿಗಳು ಸಾಮಾಜಿಕ ಅಂತರ ಮರೆತು ಗುಂಪುಗಟ್ಟಿ ದೇವಸ್ಥಾನ ಗರ್ಭಗುಡಿ ಬಾಗಿಲು ತೆರೆಯುವುದನ್ನು ಕಾತರದಿಂದ ಕಾದು ಕುಳಿತಿದ್ದರು. ಎಲ್ಲೆಡೆ ಮೊಳಗಿದ ಜಯಘೋಷ, ಗಂಟೆನಾದದೊಂದಿಗೆ ದರ್ಶನ ಆರಂಭವಾಯಿತು. ಆದರೆ ಒಮ್ಮೆಗೇ ನೂರಾರು ಮಂದಿ‌ ಜಮಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಮಾಧುಸ್ವಾಮಿ, ಎಮ್‌ಎಲ್‌ಸಿ ಗೋಪಾಲಸ್ವಾಮಿ, ಮಾಜಿ ಶಾಸಕ ಎಚ್.ಎಮ್‌.ವಿಶ್ವನಾಥ್, ಶಾಸಕ ಪ್ರೀತಂ ಜೆ.ಗೌಡ, ನ್ಯಾಯಾಧೀಶರು, ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಆರ್.ಶ್ರೀನಿವಾಸ ಗೌಡ, ಉಪವಿಭಾಗಧಿಕಾರಿ ಜಗದೀಶ್ ಸೇರಿದಂತೆ ಇತರೆ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. 
ನ.೧೬ ರವರೆಗೆ ದೇವಾಲಯದ ಬಾಗಿಲು ತೆರೆದಿರಲಿದ್ದು, ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಹಾಸನಾಂಬೆ ದರ್ಶನ ಪಡೆದ ಬಳಿಕ ‌ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಹಾಸನಾಂಬೆ, ಸಿದ್ದೇಶ್ವರಸ್ವಾಮಿ‌ ಉತ್ಸವ ಆರಂಭವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಶಾಸ್ತ್ರೋಕ್ತವಾಗಿ ಉತ್ಸವ ನಡೆಯಲಿದೆ. ದೇವಾಲಯ ಬಾಗಿಲು ತೆರೆದಾಗ ದೀಪ ಉರಿಯುತ್ತಿತ್ತು. ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶನ ಇಲ್ಲ. ಯಾರೂ ದೇವಾಲಯದ ಬಳಿ ಬರುವುದು ಬೇಡ ಎಂದು ಮನವಿ ಮಾಡಿದರು. 

ಹಾಸನಾಂಬ ದೇವಿಯ ಗರ್ಭಗುಡಿ ಬಾಗಿಲು ತೆರೆಯುವ ಕ್ಷಣಕ್ಕೆ ಸಾಕ್ಷಿಯಾಗಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಬಿಜೆಪಿ ಕಾರ್ಯಕಾರಿಣಿ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬರಲು ಸಾದ್ಯವಾಗಿಲ್ಲ. ಒಂದೆರಡು ದಿನಗಳಲ್ಲಿಯೇ ಹಾಸನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯಲಿದ್ದಾರೆ ಎಂದರು.

ಗಣ್ಯರಿಗೆ ಮತ್ತು ರಾಜಕಾರಣಿಗಳಿಗೆ ದರ್ಶನ ಸೌಲಭ್ಯವಿದ್ದು, ಜನರಿಗೇಕೆ ಅವಕಾಶ ಕಲ್ಪಿಸಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೋನಾ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿದೆ. ಹೀಗಾಗಿ ಹಾಸನಾಂಬೆ ದರ್ಶನಕ್ಕಾಗಿ ರಾಜ್ಯಾದ್ಯಂತ 5 ಲಕ್ಷಕ್ಕೂ ಹೆಚ್ಚು ಭಕ್ತರಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿದರೆ ಕೊರೋನಾ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಜನರ ಧಾರ್ಮಿಕ ಆಚರಣೆಗೆ ಅವಕಾಶ ನೀಡಿದರೆ ಅದರ ಪರಿಣಾಮ ಮತ್ತಷ್ಟು ಕೆಟ್ಟದಾಗುವ ಸಾಧ್ಯತೆ ಇದೆ. ಹೀಗಾಗಿ ನಿರ್ಬಂಧ ವಿಧಿಸಲಾಗಿದೆ ಎಂದರು.

ನಗರದ ವಿವಿಧೆಡೆ ಅಳವಡಿಸಿರುವ ಎಲ್ ಇ ಡಿ ಪರದೆಯಲ್ಲೇ ವೀಕ್ಷಣೆ ಮಾಡಿ ಹೋಗಿ ಎಂದು ವಿನಂತಿಸಿದರು. ತಾಯಿ ಆಶೀರ್ವಾದದಿಂದ ಹಾಸನ, ನಾಡು, ದೇಶದಲ್ಲಿ ಕೊರೋನಾ ತೊಲಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು. 
ಸಾರ್ವಜನಿಕರು ದೇವರ ದರ್ಶನ ಹಾಗೂ ದಿನನಿತ್ಯದ ಪೂಜೆ ವೀಕ್ಷಿಸಲು ಹಾಸನ ನಗರದ ೧೦ ಕಡೆ ಬೃಹತ್ ಎಲ್‌ಇಡಿ ಪರದೆಯ ಮೂಲಕ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ನಾಲ್ಕು ಕಡೆ ಹಾಗೂ ನಗರದ ಆರು ಕಡೆ ಎಲ್ ಇಡಿ ಪರದೆ ಅಳವಡಿಸಲಾಗಿದೆ.

ಅಲ್ಲದೆ Hassanambalive2020 ಎಂಬ ಹೆಸರಿನಲ್ಲಿ ಯೂಟ್ಯೂಬ್ ಲಿಂಕ್ (https://youtu.be/4LL2qCJtZUs) http://hasanambalive2020.com ಮೂಲಕ ದೇವಿಯ ವಿಶೇಷ ಪೂಜೆಯ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಈ ಬಾರಿ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನದಾಸೋಹ ವ್ಯವಸ್ಥೆ ಇರುವುದಿಲ್ಲ. ಕಳೆದ ವರ್ಷ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನ ಹಾಸನಾಂಬ ದೇವಿ ದರ್ಶನ ಪಡೆದಿದ್ದರು. ಜಿಲ್ಲೆ ಅಲ್ಲದೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ನಿಯಂತ್ರಣ ಕಷ್ಟಸಾಧ್ಯ. ಕಳೆದ ಬಾರಿ ಪ್ರತಿದಿನ ಸುಮಾರು 50 ಸಾವಿರ ಭಕ್ತರು ದೇವರ ದರ್ಶನ ಪಡೆದಿದ್ದರು. ಆದ್ದರಿಂದ ಈ ಬಾರಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿಲ್ಲ ಎಂದು ಈಗಾಗಲೇ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ‌.

ಕೊರೋನಾ ಆತಂಕ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಾಲಯ ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ದೇವಾಲಯಕ್ಕೆ ಆಗಮಿಸುವ ಗಣ್ಯರ ತಪಾಸಣೆಗೆ ಥರ್ಮಲ್ ಸ್ಕ್ಯಾನಿಂಗ್ –ಸ್ಯಾನಿಟೈಸ ರ್ ಮಾಸ್ಕ್ ಗಳ ಸೌಲಭ್ಯ ಒದಗಿಸಲಾಗಿತ್ತು. ಇದಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ ಸ್ಥಳದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಹಾಗೂ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು. ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com