ತಮಿಳುನಾಡು: ಡ್ರಗ್ಸ್ ಡೀಲ್ ಪ್ರಕರಣ ವರದಿ ಭೀತಿ, ಪತ್ರಕರ್ತನ ಕಗ್ಗೊಲೆ!

ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಡ್ರಗ್ ಡೀಲರ್‍ಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಭಯದಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಪತ್ರಕರ್ತನನ್ನು ಹತ್ಯೆ ಮಾಡಿದೆ. ಇಸ್ರೇವೆಲ್ ಮೋಸೆಸ್ ಎಂಬ 27 ವರ್ಷದ ಪತ್ರಕರ್ತ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಭಾನುವಾರ ಸಂಜೆ  ಮನೆಯಲ್ಲಿದ್ದ ಮೋಸಸ್ ರನ್ನು ಕರೆ ಮಾಡಿ ಮನೆಯಿಂದ ಹೊರಗೆ ಬರುವಂತೆ ದುಷ್ಕರ್ಮಿಗಳು ಕರೆದಿದ್ದಾರೆ. ಈ ವೇಳೆ ಹೊರಗೆ ಬಂದ ಮೋಸಸ್ ರನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಗೈದಿದ್ದಾರೆ. 

ಮೊಸಸ್ ಹೊರಗೆ ಬಂದಾಗ ಆತನ್ನನ್ನು ಐದು ಮಂದಿ ಹಿಡಿದಿದ್ದರು. ಈ ವೇಳೆ ಕುಟುಂಬಸ್ಥರು ಅವರನ್ನು ಮೋಸಸ್ ನ ಸ್ನೇಹಿತರು ಎಂದು ಭಾವಿಸಿದ್ದರು. ಆದರೆ ಕತ್ತು ಹಿಸುಕಿ ಆತನನ್ನು ರಸ್ತೆಯಲ್ಲಿ ಬಿಸಾಡಿ ಹೋದಾಗ ಕುಟುಂಬಸ್ಥರಿಗೆ ಧಾರುಣದ ಅರಿವಾಗಿದೆ. ಈ ಸಂಬಂಧ ಕುಟುಂಬಸ್ಥರು ಪೊಲೀಸ್ ದೂರು  ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಕೊಲೆ ಪ್ರಕರಣ ಸಂಬಂಧ ಇದೀಗ ಪೊಲೀಸರು ಐದು ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರು ಸ್ಥಳೀಯ ಕೆರೆಯ ಅಂಗಳದಲ್ಲಿ ರಾತ್ರಿ ವೇಳೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ಕೊಲೆಯಾದ ಪತ್ರಕರ್ತನ ತಂದೆ ಜ್ಞಾನರಾಜ್ ಅವರು, ತನ್ನ ಮಗ ತನಗೆ ಜೀವ ಬೆದರಿಕೆ ಇದೆ ಎಂದು ದೂರಿದ್ದರು. ಆದರೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ. ಜ್ಞಾನರಾಜ್ ಅವರ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು  ಮೋಸಸ್ ಅಂತಹ ಯಾವುದೇ ದೂರು ನೀಡಿರಲಿಲ್ಲ. ಅಲ್ಲದೆ ಟಿವಿಯಲ್ಲೂ ಕೂಡ ಯಾವುದೇ ರೀತಿಯ ಡ್ರಗ್ಸ್ ದಂಧೆಯ ಸುದ್ದಿ ಪ್ರಸಾರವಾಗಿರಲಿಲ್ಲ. ಅಲ್ಲದೆ ಮೋಸಸ್ ಕೂಡ ಯಾವುದೇ ರೀತಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಇದು ವಯಕ್ತಿಕ ದ್ವೇಷದ ಕೊಲೆಯಂತಿದೆ. ಭೂಮಿಗೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಮೋಸಸ್ ಕೊಲೆಯಾಗಿರಬಹುದು ಎಂದು ಹೇಳಿದ್ದಾರೆ.

ಪೊಲೀಸರ ಆರೋಪವನ್ನು ಅಲ್ಲ ಗಳೆದಿರುವ ಹಿರಿಯ ಪತ್ರಕರ್ತೆ ಭಾರತಿ ತಮಿಳನ್ ಅವರು, 'ಸೋಮಂಗಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳ ಬಗ್ಗೆ ವರದಿ ಮಾಡಿದ ನಂತರ ಮೋಸಸ್ ಗೆ ಜೀವ ಬೆದರಿಕೆ ಬಂದಿತ್ತು. ಪೊಲೀಸರ  ನಿಷ್ಕ್ರಿಯತೆಯ ಮಧ್ಯೆ ಆತನ ಕೊಲೆ ನಡೆದಿದೆ ಎಂದು ಹೇಳಿದ್ದಾರೆ. ಅಲ್ಲದೆ ತಮಿಳುನಾಡಿ ಪತ್ರಕರ್ತರ ಭದ್ರತೆ ಆತಂಕದಲ್ಲಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com