ಕಾಂಗ್ರೆಸ್ ನಲ್ಲಿ ಮಂಕಾದ ಭವಿಷ್ಯ: ಪಕ್ಷದ ದೌರ್ಬಲ್ಯ ಪ್ರಾದೇಶಿಕ ಪಕ್ಷಗಳಿಗೆ ವರದಾನ!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದಿಂದ ಮಹಾರಾಷ್ಟ್ರ ಕಾಂಗ್ರೆಸ್  ಆತಂಕಕ್ಕೊಳಗಾಗಿದೆ. ಚುನಾವಣಾ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅನೇಕ ಮುಖಂಡರು ಹೇಳುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದಿಂದ ಮಹಾರಾಷ್ಟ್ರ ಕಾಂಗ್ರೆಸ್ ಆತಂಕಕ್ಕೊಳಗಾಗಿದೆ. ಚುನಾವಣಾ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅನೇಕ ಮುಖಂಡರು ಹೇಳುತ್ತಿದ್ದಾರೆ.

ಇದೇ ರೀತಿಯಲ್ಲಿ ಮುಂದುವರೆದರೆ ನಮ್ಮ ಭವಿಷ್ಯ ಮಂಕಾಗಲಿದೆ. ಪಕ್ಷವನ್ನು ದುರ್ಬಲಗೊಳಿಸುವುದರಿಂದ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ರಾಜಕೀಯ ಅವಕಾಶವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿಕೊಂಡಿದ್ದಾರೆ.

ಬಿಹಾರದಲ್ಲಿ ಆಡಳಿತ ವಿರೋಧಿ ಹಾಗೂ ತೇಜಸ್ವಿ ಯಾದವ್ ಪರ ಅಲೆಯಿದ್ದರೂ ಕಾಂಗ್ರೆಸ್ ಸ್ಪರ್ಧಿಸಿದ್ದ 70 ಕ್ಷೇತ್ರಗಳ ಪೈಕಿಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ವರ್ಷ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಯಾವುದೇ ಕೇಂದ್ರದ ಮುಖಂಡರ ಬೆಂಬಲವಿಲ್ಲದಿದ್ದರೂ  ಸ್ಪರ್ಧಿಸಿದ್ದ 120 ಸ್ಥಾನಗಳ ಪೈಕಿ 44 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು ಎಂದು ಮತ್ತೊರ್ವ ಮುಖಂಡರು ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳು ಸಾಂಪ್ರಾದಾಯಿಕವಾಗಿ ಕಾಂಗ್ರೆಸ್ ಜೊತೆಗೆ ಮೈತ್ರಿ ಪಕ್ಷಗಳಾಗಿವೆ ಆದರೆ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಸೋಲಿನ ಭೀತಿಯಿಂದಾಗಿ ಹೆಚ್ಚಿನ ಸ್ಥಾನಗಳಲ್ಲಿ ನಾವು ಸ್ಪರ್ಧಿಸಲು ಅವರು ಅವಕಾಶ ನೀಡಲ್ಲ, ಯಾವುದೇ ಚುನಾವಣೆಯಲ್ಲಿ ಅಧಿಕಾರ ಚೌಕಾಸಿ ಮೂಲಕ ನಮ್ಮ ಕ್ಷೇತ್ರಗಳಲ್ಲಿ ಹಾನಿಯುಂಟು ಮಾಡುತ್ತಾರೆ. ಅವರು ಮತ್ತಷ್ಟು ಸದೃಢರಾಗುತ್ತಾರೆ. ಮತ್ತೊಂದಡೆ ಬಿಜೆಪಿ ಬೆಳೆಯುತ್ತಿದೆ. ಈ ಪರಿಸ್ಥಿತಿ ಸರಿಯಾಗಿಲ್ಲ ಎಂದು ಮತ್ತೋರ್ವ ಪಕ್ಷದ ಮುಖಂಡರು ತಿಳಿಸಿದ್ದಾರೆ. 

ದೇಶದಲ್ಲಿ ಕಾಂಗ್ರೆಸ್ ದೊಡ್ಡ ರಾಜಕೀಯ ಪಕ್ಷ ಅಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು, ಒಮ್ಮೆ ಪ್ರಾದೇಶಿಕ ಪಕ್ಷಗಳಿಗೆ ಜಾಗ ಮಾಡಿಕೊಟ್ಟು ಮತ್ತೆ ಪಕ್ಷ ಪುಟಿದೇಳಲು ಬಹಳ ಕಷ್ಟಪಡಬೇಕಾಗುತ್ತದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಇದೀಗ ಬಿಹಾರದಲ್ಲಿ ಇದನ್ನು ನೋಡಿದ್ದೇವೆ. ಪಕ್ಷದ ವರಿಷ್ಠರು ಪಕ್ಷದ ರಚನೆಯನ್ನು ಬದಲಾಯಿಸಿ ಸ್ಥಳೀಯ ನಾಯಕರಿಗೆ ಅಧಿಕಾರ ನೀಡಬೇಕು. ಮುಂದೆ ಇರುವುದೇ ಇದೊಂದೆ ದಾರಿ. ಸಕ್ರಿಯ ರಾಜಕಾರಣದಲ್ಲಿರುವ ಖಾಯಂ ಅಧ್ಯಕ್ಷರು ಬೇಕೆಂದು ಪಕ್ಷದ ಮತ್ತೊಬ್ಬ ಮುಖಂಡರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com