ನಿವಾರ್ ಚಂಡಮಾರುತ: ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಹೈ ಅಲರ್ಟ್, ಚೆನ್ನೈಗೂ ಅಪಾಯ

ಈ ವರ್ಷದ ಈಶಾನ್ಯ ಮಾನ್ಸೂನ್‌ನ ಮೊದಲ ಚಂಡಮಾರುತ, ನಿವಾರ್ ಶೀಘ್ರದಲ್ಲೇ ತಮಿಳುನಾಡಿಗೆ ಅಪ್ಪಳಿಸಲಿದ್ದು, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಈ ವರ್ಷದ ಈಶಾನ್ಯ ಮಾನ್ಸೂನ್‌ನ ಮೊದಲ ಚಂಡಮಾರುತ, ನಿವಾರ್ ಶೀಘ್ರದಲ್ಲೇ ತಮಿಳುನಾಡಿಗೆ ಅಪ್ಪಳಿಸಲಿದ್ದು, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಹೌದು..ದಕ್ಷಿಣ ಭಾರತದಲ್ಲಿ ಮುಂಗಾರು ಅವಧಿ ಮುಗಿದ ಬಳಿಕವೂ ಸತತ ವಾಯುಭಾರ ಕುಸಿತದಿಂದ ಚಂಡಮಾರುತದ ವಾತಾವರಣ ನಿರ್ಮಾಣವಾಗಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮುಂತಾದೆಡೆ ನಿರಂತರ ಮಳೆಯಾಗುತ್ತಿದೆ. ಇದೀಗ ಹೊಸ ಸೇರ್ಪಡೆ ಎಂಬಂತೆ ಈಗ ನಿವಾರ್  ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಅನೇಕ ಕಡೆ ಭಾರಿ ಮಳೆ ಸುರಿಸುವ ಸಾಧ್ಯತೆ ಇದೆ. ನವೆಂಬರ್ 25ರಂದು ಕರೈಕಲ್, ಪುದುಚೆರಿಯಲ್ಲಿ, ನ. 25 ಮತ್ತು 26ರಂದು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ರಾಯಲಸೀಮೆ ಜಿಲ್ಲೆಗಳಲ್ಲಿ  ಭಾರಿಯಿಂದ ಅತಿ ಭಾರಿ ಮಳೆ ಸುರಿಸುವ ಸಂಭವವಿದೆ. ವಿಶಾಖಪಟ್ಟಣಂ ಮತ್ತು ಪೂರ್ವ ಗೋದಾವರಿ ಜಿಲ್ಲೆಯಲ್ಲಿಯೂ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪ್ರಸ್ತುತ ನಿವಾರ್ ಚಂಡಮಾರುತವು ಶ್ರೀಲಂಕಾದ ಉತ್ತರ ಭಾಗ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯತ್ತ ಪಶ್ಚಿಮದಿಂದ ಚಲಿಸುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ನವೆಂಬರ್ 26ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ. 

ನಾಳೆ ತಮಿಳುನಾಡಿಗೆ ಅಪ್ಪಳಿಸಲಿರುವ ನಿವಾರ್
ಇನ್ನು ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತವು ತಮಿಳುನಾಡಿನ ಚೆನ್ನೈ ಸೇರಿದಂತೆ ಅನೇಕ ಭಾಗಗಳಲ್ಲಿ ವ್ಯಾಪಕ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ತಮಿಳುನಾಡು ಕರಾವಳಿಯತ್ತ ಸಾಗುತ್ತಿರುವ ಈ ಚಂಡಮಾರುತ ನಿವಾರ್, ನಾಳೆ ಕರೈಕಲ್ ಮತ್ತು ಮಹಾಬಲಿಪುರಂಗೆ  ಅಪ್ಪಳಿಸಲಿದೆ. ಹೀಗಾಗಿ ಈ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಕೇವಲ ತಮಿಳುನಾಡು ಮಾತ್ರವಲ್ಲದೇ, ನೆರೆಯ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಕೆಲ ಭಾಗಗಳಿಗೂ ನಿವಾರ್ ಚಂಡಮಾರುತದ ಎಪೆಕ್ಟ್ ತಟ್ಟಲಿದ್ದು, ಇಲ್ಲಿಯೂ ಕೂಡ ಭಾರಿ ಮಳೆಯಾಗುವ ಸಾಧ್ಯತೆ  ಇದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಮೇರೆಗೆ, ಇಂದು ತಮಿಳುನಾಡಿನ ಪುದುಕೋಟ್ಟೈ, ತಂಜಾವೂರ್, ತಿರುವರೂರ್, ಕರೈಕಲ್, ನಾಗಪಟ್ಟಣಂ, ಕುಡಲೂರ್, ಅರಿಯಲೂರ್ ಮತ್ತು ಪೆರಂಬೂರ್, ರಾಮನಾಥಪುರಂ, ಶಿವಗಂಗೈ, ತಿರುಚಿನಾಪಳ್ಳಿ, ಕಲ್ಲಾಕುರಿಚಿ, ವಿಳ್ಳುಪುರಂ, ಪುದುಚೆರಿ, ಚೆನ್ನೈ, ಕಾಂಚೀಪುರಂ,  ತಿರುವಳ್ಳೂರ್, ರಾಣಿಪೇಟೈ, ತಿರುವಣ್ಣಾಮಲೈ, ತಿರುಪತ್ತೂರ್ ಮತ್ತು ವೆಲೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.  

ತಮಿಳುನಾಡು ಮಾತ್ರವಲ್ಲದೇ ಹಿಂದೂ ಮಹಾಸಾಗರ, ದಕ್ಷಿಣ ಬಂಗಾಳ ಕೊಲ್ಲಿಯ ಕೇಂದ್ರ ಭಾಗಗಳ ಪ್ರದೇಶಗಳಲ್ಲಿ ಮತ್ತು ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರ, ಮನ್ನಾರ್ ಕೊಲ್ಲಿ, ತಮಿಳುನಾಡಿನ ಕರಾವಳಿ, ಪುದುಚೆರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿಯೂ ಮಳೆ ಅಬ್ಬರಿಸಲಿದೆ. ಹೀಗಾಗಿ  ಮುಂಜಾಗ್ರತಾ ಕ್ರಮವಾಗಿ ಮೀನುಗಾರಿಕೆ ನಡೆಸದಂತೆ ಸ್ಥಳೀಯ ಜಿಲ್ಲಾಡಳಿತಗಳು ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಯ ಸಾಹಸಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ. ಇದಲ್ಲದೆ ತಿರುಚಿ, ನಾಮಕ್ಕಲ್, ಈರೋಡ್, ಕರೂರ್, ಧರ್ಮಪುರಿ, ಸೇಲಂ, ಕೃಷ್ಣಗಿರಿಯಲ್ಲಿ ಮಳೆ ಆರ್ಭಟ  ಮುಂದುವರೆಯಲಿದೆ.  

ಚೆನ್ನೈನಲ್ಲಿ ಭಾರಿ ಮಳೆ
ಚಂಡಮಾರುತದ ಪರಿಣಾಮ ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ 11 ಸೆಂ.ಮೀ ನಿಂದ 20 ಸೆಂ.ಮೀ ಮಳೆಯಾಗುವ ಸಾಧ್ಯತೆಯಿದ್ದು,  ಗಾಳಿಯ ವೇಗವು ಮಂಗಳವಾರ 55-65 ಕಿ.ಮೀ ವೇಗದಿಂದ 75 ಕಿ.ಮೀ.ಗೆ ಏರುತ್ತದೆ. ಬುಧವಾರ ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರದೇಶಗಳಲ್ಲಿ ಗಾಳಿಯ  ವೇಗ 100 ಕಿ.ಮೀ. ನಿಂದ 120 ಕಿ.ಮೀ.ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com