ಕೋವಿಡ್ ಲಸಿಕೆ: ಭಾರತಕ್ಕೇ ಮೊದಲ ಆದ್ಯತೆ; ಸರ್ಕಾರಕ್ಕೆ 250 ರೂ. ಗಳಿಗೆ ಲಸಿಕೆ, ಖಾಸಗಿ ಮಾರುಕಟ್ಟೆಗೆ 1000 ರೂ.- ಸೆರಂ ಇನ್ಸ್ಟಿಟ್ಯೂಟ್

ಮಾರಕ ಕೊರೋನಾ ವೈರಸ್ ಲಸಿಕೆ ಸರಬರಾಜು ಕುರಿತಂತೆ ಭಾರತಕ್ಕೇ ತಮ್ಮ ಮೊದಲ ಆದ್ಯತೆ ಎಂದು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.
ಕೋವಿ ಶೀಲ್ಡ್ ಲಸಿಕೆ
ಕೋವಿ ಶೀಲ್ಡ್ ಲಸಿಕೆ

ನವದೆಹಲಿ: ಮಾರಕ ಕೊರೋನಾ ವೈರಸ್ ಲಸಿಕೆ ಸರಬರಾಜು ಕುರಿತಂತೆ ಭಾರತಕ್ಕೇ ತಮ್ಮ ಮೊದಲ ಆದ್ಯತೆ ಎಂದು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.

ಬ್ರಿಟನ್ ಮೂಲದ ಆಕ್ಸ್‌ಫರ್ಡ್‌ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌–19 'ಕೋವಿಶೀಲ್ಡ್‌' ಲಸಿಕೆಯು ಭರವಸೆದಾಯಕ ಫಲಿತಾಂಶ ನೀಡಿರುವುದಾಗಿ ಪ್ರಕಟಿಸಲಾಗಿದ್ದು, ಇದರ ಬೆನ್ನಲ್ಲೇ ಈ ಕುರಿತಂತೆ ಟ್ವೀಟ್ ಮಾಡಿರುವ ಸೆರಂ ಸಂಸ್ಥೆಯ  ಮುಖ್ಯಸ್ಥ ಅದಾರ್ ಪೂನಾವಾಲ ಅವರು, ಆಸ್ಟ್ರಾ ಜೆನಿಕಾ ಸಂಸ್ಥೆಗೆ ಶುಭ ಕೋರಿದ್ದಾರೆ. 

ಇದೇ ವೇಳೆ ಭಾರತಕ್ಕೆ ಲಸಿಕೆ ಪೂರೈಕೆ ಕುರಿತು ಖಾಸಗಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಲಸಿಕೆ ಪೂರೈಕೆಯಲ್ಲಿ ಭಾರತವೇ ಮೊದಲ ಆದ್ಯತೆಯಾಗಿರಲಿದೆ. ಈಗಾಗಲೇ ಲಸಿಕೆಯ 4 ಕೋಟಿ ಡೋಸ್‌ಗಳನ್ನು ಸಿದ್ಧಪಡಿಸಲಾಗಿದೆ. ಜನವರಿ ವೇಳೆಗೆ ನಾವು 10 ಕೋಟಿ  ಡೋಸ್‌ಗಳಷ್ಟು ಲಸಿಕೆ ತಯಾರಿಸಿರುತ್ತೇವೆ.' ಸೆರಂ ಸಂಸ್ಥೆಯಲ್ಲಿ ತಯಾರಿಸಲಾಗುವ ಶೇ 90ರಷ್ಟು ಪ್ರಮಾಣದ ಲಸಿಕೆಯನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡುವ ನಿರೀಕ್ಷೆ ಇದೆ. ಪ್ರತಿ ಡೋಸ್‌ ಲಸಿಕೆಯನ್ನು ಸರ್ಕಾರಕ್ಕೆ 250 ರೂಪಾಯಿಗೆ (3 ಡಾಲರ್) ಮಾರಾಟ  ಮಾಡಲಾಗುತ್ತದೆ. ಖಾಸಗಿ ಮಾರುಕಟ್ಟಗೆ ಈ ದರ ಪ್ರತೀ ಡೋಸ್ ಗೆ 1000 ರೂಗಳಾಗಿರುತ್ತದೆ ಎಂದು ಹೇಳಿದ್ದಾರೆ.

'ಸಂಸ್ಥೆಯಲ್ಲಿ ತಯಾರಿಸಲಾಗುವ ಲಸಿಕೆಯ ಒಟ್ಟು ಪ್ರಮಾಣದಲ್ಲಿ ಶೇ 90ರಷ್ಟು ಡೋಸ್‌ಗಳು ಭಾರತ ಸರ್ಕಾರಕ್ಕೆ ಹೋಗಲಿವೆ ಹಾಗೂ ಬಹುಶಃ ಶೇ 10ರಷ್ಟು ಡೋಸ್‌ಗಳು ಖಾಸಗಿ ಮಾರುಕಟ್ಟೆಗೆ ಮಾರಾಟವಾಗಲಿದೆ. ಖಾಸಗಿಯಾಗಿ ಪ್ರತಿ ಡೋಸ್‌ಗೆ ರೂ 1,000ಕ್ಕೆ ಮಾರಾಟ  ಮಾಡವಾಗಲಿದೆ. ತುರ್ತು ಸಂದರ್ಭಗಳಲ್ಲಿ ಲಸಿಕೆ ಬಳಕೆಗೆ ಡಿಸೆಂಬರ್‌ನಲ್ಲಿ ಔಷಧ ಗುಣಮುಟ್ಟ ನಿಯಂತ್ರಣ ಸಂಸ್ಥೆಯಿಂದ ಅನುಮತಿ ದೊರೆತರೆ, ಜನವರಿಯಲ್ಲಿ ಲಸಿಕೆಯ ಡೋಸ್‌ಗಳನ್ನು ಬಿಡುಗಡೆ ಮಾಡಬಹುದಾಗಿದೆ' ಎಂದು ಪೂನಾವಾಲ ಹೇಳಿದ್ದಾರೆ.

ಈಗಾಗಲೇ 23,000 ಜನರ ಮೇಲೆ ಆಸ್ಟ್ರಾಜೆನೆಕಾ 'ಕೋವಿಶೀಲ್ಡ್‌' ಲಸಿಕೆಯ ಪ್ರಯೋಗ ನಡೆಸಲಾಗಿದ್ದು, ಕೊರೊನಾ ವೈರಸ್‌ ಸೋಂಕು ತಡೆಯುವುದರಲ್ಲಿ ಈ ಲಸಿಕೆ ಶೇ 70ರಷ್ಟು ಪರಿಣಾಮಕಾರಿಯಾಗಿರುವುದು ಎಂದು ಪ್ರಯೋಗದ ಮಧ್ಯಂತರ ವರದಿಯಿಂದ ತಿಳಿದುಬಂದಿದೆ.

ಮೂಲಗಲ ಪ್ರಕಾರ ನಿಯಂತ್ರಣ ಸಂಸ್ಥೆಗಳ ಅನುಮತಿ ದೊರೆಯುತ್ತಿದ್ದಂತೆ ಆಸ್ಟ್ರಾಜೆನೆಕಾ 2021ಕ್ಕೆ 300 ಕೋಟಿ ಡೋಸ್‌ ಲಸಿಕೆ ತಯಾರಿಸುವ ಗುರಿ ಹೊಂದಿದೆ. ಆಸ್ಟ್ರಾಜೆನೆಕಾ ಮತ್ತು ಅಮೆರಿಕದ ಬಯೋಟೆಕ್‌ ಕಂಪನಿ 'ನೊವ್ಯಾಕ್ಸ್‌'ನ ಕೋವಿಡ್‌–19 ಲಸಿಕೆಯ 10 ಕೋಟಿ  ಡೋಸ್‌ಗಳನ್ನು ತಯಾರಿಸಲು ಸೆರಂ ಸಂಸ್ಥೆಯು ಅಂತರರಾಷ್ಟ್ರೀಯ ಲಸಿಕೆ ಪೂರೈಕೆ ಸಂಸ್ಥೆ ಗಾವಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಭಾರತ ಕೋವಿಡ್‌–19 ಪ್ರಕರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ವರ್ಷ ಸೆಪ್ಟೆಂಬರ್‌ ವೇಳೆಗೆ 25–30 ಕೋಟಿ ಭಾರತೀಯರಿಗೆ  ಲಸಿಕೆ ಹಾಕುವ ನಿರೀಕ್ಷೆ ಇರುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್‌ ಸೋಮವಾರ ಹೇಳಿದ್ದರು.

ಶೇಖರಣೆ ಮತ್ತು ಸರಬರಾಜು ಸುಲಭ
ಇನ್ನು ಸೆರಂ ಸಂಸ್ಥೆ ಹೇಳಿಕೊಂಡಿರುವಂತೆ ಆಸ್ಚ್ರಾ ಜೆನಿಕಾ ಸಂಸ್ಥೆಯ ಕೋವಿಡ್ ಲಸಿಕೆಯ ಶೇಖರಣೆ ಮತ್ತು ಸರಬರಾಜು ಸುಲಭದ್ದಾಗಿದೆ. ಸಾಮಾನ್ಯ ರೆಫ್ರಿಜರೇಟರ್‌ನಲ್ಲಿ ಇರುವಷ್ಟು ಶೀತಲ ವಾತಾವರಣದೊಂದಿಗೆ ಈ ಲಸಿಕೆಯ ಪೂರೈಕೆ ಮಾಡುವುದು ಸಾಧ್ಯವಿದೆ. ಇತರೆ ಲಸಿಕೆಗಳನ್ನು  ಸಂಗ್ರಹಿಸಲು ಹೆಚ್ಚು ಶೀತಲ ವಾತಾವರಣದ ಅಗತ್ಯವಿರುತ್ತದೆ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com