ದೆಹಲಿ ಚಲೋ: ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ತಡೆಯಲು ಗಡಿ ಬಂದ್ ಮಾಡಿದ ಪೊಲೀಸರು
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ - ಹರಿಯಾಣ ಹಾಗೂ ಸುತ್ತಮುತ್ತಲ ರಾಜ್ಯಗಳ ರೈತರು ಗುರುವಾರ ದೆಹಲಿ ಚಲೋ ಆಂದೋಲನ ಆರಂಭಿಸಿದ್ದಾರೆ.
Published: 26th November 2020 03:07 PM | Last Updated: 26th November 2020 03:07 PM | A+A A-

ರೈತರ ತಡೆಯಲು ಜಲ ಫಿರಂಗಿ ಪ್ರಯೋಗ
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ - ಹರಿಯಾಣ ಹಾಗೂ ಸುತ್ತಮುತ್ತಲ ರಾಜ್ಯಗಳ ರೈತರು ಗುರುವಾರ ದೆಹಲಿ ಚಲೋ ಆಂದೋಲನ ಆರಂಭಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರೈತರು ದೆಹಲಿ-ಹರಿಯಾಣ ಹೆದ್ದಾರಿಯಲ್ಲಿ ಜಮಾಯಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ದೆಹಲಿಯವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ದೆಹಲಿ ಸಮೀಪ ಇರುವ ರಾಜ್ಯಗಳಾದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ತಾನದಿಂದ ರೈತರು ಟ್ರ್ಯಾಕ್ಟರ್ ಮೂಲಕ ಆಗಮಿಸುತ್ತಿದ್ದಾರೆ.
ಇಂದಿನಿಂದ ದೆಹಲಿಯಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ರೈತರು ತೀರ್ಮಾನಿಸಿದ್ದಾರೆ. 30ಕ್ಕೂ ಹೆಚ್ಚು ರೈತ ಪರ ಸಂಘಟನೆಗಳು ಅಭಿಯಾನದಲ್ಲಿ ಭಾಗಿಯಾಗಿವೆ. ಮುನ್ನೆಚ್ಚರಿಕಾ ಕ್ರಮಲವಾಗಿ ದೆಹಲಿ-ಹರಿಯಾಣ ಹೆದ್ದಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸದಂತೆ ತಡೆಯಲು ಗಡಿಗಳನ್ನು ಬಂದ್ ಮಾಡಲಾಗಿದೆ.
ದೆಹಲಿಯ ನೆರೆಯ ನಗರಗಳಾದ ಫರಿದಾಬಾದ್, ಘಾಜಿಯಾಬಾದ್ ಮತ್ತು ನೊಯಿಡಾದಲ್ಲಿಯೇ ರೈತರನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.
ನವೆಂಬರ್ 26 ಮತ್ತು 27 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಇನ್ನು ರೈತರ ಪ್ರತಿಭಟನೆಗೆ ಬೆಂಬಲ ಘೋಷಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, "ಕೇಂದ್ರ ಸರ್ಕಾರದ ಎಲ್ಲಾ ಮೂರು ಮಸೂದೆಗಳು ರೈತರ ವಿರುದ್ಧವಾಗಿವೆ. ಮಸೂದೆಯನ್ನು ಹಿಂತೆಗೆದುಕೊಳ್ಳುವ ಬದಲು, ಶಾಂತಿಯುತವಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ಜಲ ಫಿರಂಗಿಗಳನ್ನು ಬಳಸಿ ಹತ್ತಿಕ್ಕಲಾಗುತ್ತಿದೆ. ಅವರ ವಿರುದ್ಧದ ದೌರ್ಜನ್ಯ ದೊಡ್ಡ ತಪ್ಪು. ಶಾಂತಿಯುತ ಪ್ರತಿಭಟನೆ ನಡೆಸುವುದು ಅವರ ಸಾಂವಿಧಾನಿಕ ಹಕ್ಕು" ಎಂದು ಹೇಳಿದ್ದಾರೆ.