ದೆಹಲಿ ಗಡಿ ಸಮೀಪಿಸಿದ 'ದೆಹಲಿ ಚಲೋ' ಪ್ರತಿಭಟನೆ ನಿರತ ಪಂಜಾಬ್ ರೈತರು: ರಾಷ್ಟ್ರ ರಾಜಧಾನಿ ಸುತ್ತಮುತ್ತ ತೀವ್ರ ಭದ್ರತೆ 

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಶುಕ್ರವಾರ ಕೂಡ ಮುಂದುವರಿದಿದ್ದು ರೊಹ್ಟಕ್-ಜ್ಹಜ್ಜರ್ ಗಡಿಯಲ್ಲಿ ಇಂದು ಬೆಳಗ್ಗೆಯೇ ರೈತರು ಜಮಾಯಿಸಿದ್ದಾರೆ.
ಇಂದು ದೆಹಲಿ ಚಲೋ ಪ್ರತಿಭಟನೆ ಮುಂದುವರಿಸಿದ ರೈತರು
ಇಂದು ದೆಹಲಿ ಚಲೋ ಪ್ರತಿಭಟನೆ ಮುಂದುವರಿಸಿದ ರೈತರು

ಚಂಡೀಗಢ: ಗಡಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಭದ್ರತಾ ಪಡೆ ನಿಯೋಜನೆ ಹೊಂದಿದ್ದರೂ ಕೂಡ ಪಂಜಾಬ್ ನ ರೈತರು ದೆಹಲಿಯ ಗಡಿಭಾಗಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದು, ಹರ್ಯಾಣದಲ್ಲಿ ಪೊಲೀಸ್ ಬ್ಯಾರಿಕೇಡ್ ನ್ನು ಮುರಿದು ಮುನ್ನುಗ್ಗಿದ್ದಾರೆ. 

ಪೊಲೀಸರು ಅಶ್ರುವಾಯು ಸಿಡಿಸಿದರೂ ಪ್ರತಿಭಟನಾಕಾರರು ಕ್ಯಾರೇ ಅನ್ನದೆ ತಮ್ಮ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. 

ನಿನ್ನೆ ಪ್ರತಿಭಟನಾಕಾರರು ನಗರಕ್ಕೆ ಪ್ರವೇಶಿಸಬಾರದೆಂದು ದೆಹಲಿ ಪೊಲೀಸರು ಭದ್ರತೆಯನ್ನು ವಿಸ್ತರಿಸಿದ್ದರು. ದೆಹಲಿ ಹರ್ಯಾಣ ಗಡಿಯಲ್ಲಿ ಸಿಂಗು ಎಂಬಲ್ಲಿ ಪೊಲೀಸರು ಮರಳು ತುಂಬಿದ ಟ್ರಕ್‌ಗಳು, ಜಲ ಫಿರಂಗಿಗಳು ಮತ್ತು ಮುಳ್ಳುತಂತಿಯ ಬೇಲಿಗಳನ್ನು ಹಾಕಿದ್ದರು. ಫರಿದಾಬಾದ್ ಮತ್ತು ಗುರುಗಾಂವ್ ಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 

ಆದರೂ ಎರಡು ಗುಂಪುಗಳಲ್ಲಿ ಬಂದ ಪ್ರತಿಭಟನಾ ನಿರತ ರೈತರು, ಸಿಂಘು ಮತ್ತು ಟಿಕ್ರಿ ಎಂಬಲ್ಲಿಗೆ ಆಗಮಿಸಿದರು. ಅಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದ್ದರು, ಆದರೂ ಪ್ರತಿಭಟನಾ ನಿರತ ರೈತರು ಕ್ಯಾರೇ ಅನ್ನಲಿಲ್ಲ. ನಾವು ದೆಹಲಿ ಪ್ರವೇಶಿಸುತ್ತೇವೆ. ನೂತನ ಕೃಷಿ ಮಸೂದೆಯನ್ನು ಸರ್ಕಾರ ಹಿಂತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ಮುಂದುವರಿಯುವುದಿಲ್ಲ ಎಂದು ಪಂಜಾಬ್ ನ ಫತೇಗರ್ ಸಾಹಿಬ್ ನ ರೈತರು ಸಿಂಘು ಗಡಿಭಾಗದತ್ತ ತಲುಪಿ ಹೇಳಿದ್ದಾರೆ.

ಕಳೆದ ರಾತ್ರಿ ರೈತರು ಹಲವು ಪ್ರದೇಶಗಳಲ್ಲಿ ತಂಗಿದ್ದರು. ಪಾಣಿಪತ್, ಹರ್ಯಾಣಗಳಲ್ಲಿ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಗಳನ್ನು ಮುರಿದಿದ್ದಾರೆ ಎಂದು ತಿಳಿದುಬಂದಿದೆ.

ರೈತರ ಪ್ರತಿಭಟನೆ ಮಧ್ಯೆ ಹರ್ಯಾಣ-ದೆಹಲಿ ಗಡಿಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಿಂಘು ಗಡಿಯತ್ತ ವಾಹನಗಳು ಸಂಚರಿಸಲು ಪೊಲೀಸರು ಬಿಡುತ್ತಿಲ್ಲ. ಅಂತರಾಜ್ಯ ವಾಹನಗಳು ಪೂರ್ವ ಮತ್ತು ಪಶ್ಚಿಮ ಫೆರಿಫೆರಲ್ ಎಕ್ಸ್ ಪ್ರೆಸ್ ವೇ ಮೂಲಕ ಸಂಚಾರ ನಡೆಸಬಹುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

#WATCH Police use tear gas shells to disperse protesting farmers at Singhu border (Haryana-Delhi border).

Farmers are headed to Delhi as part of their protest march against Centre's Farm laws. pic.twitter.com/Z0yzjX85J5

ಪಂಜಾಬ್ ನ ರೈತರ ಗುಂಪು ಈಗ ಬದದ್ದೂರ್ ಘರ್ ಬಳಿ ತಲುಪಿದ್ದು ದೆಹಲಿಯತ್ತ ಮುಖಮಾಡಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ-ಗುರುಗ್ರಾಮ್ ಗಡಿಭಾಗದಲ್ಲಿ ಪೊಲೀಸರು ಎಲ್ಲಾ ಪ್ರಯಾಣಿಕರ ವಾಹನಗಳನ್ನು ತಪಾಸಣೆ ಮಾಡಿಯೇ ಮುಂದೆ ಕಳುಹಿಸುತ್ತಿರುವುದರಿಂದ ಸಂಚಾರ ವಾಹನ ದಟ್ಟಣೆ ಉಂಟಾಗಿದೆ.

ದೆಹಲಿ-ಗುರುಗ್ರಾಮ್ ಗಡಿಯಲ್ಲಿ ಸಿಐಎಸ್ಎಫ್ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಸಾವಿರಾರು ಮಂದಿ ಪಂಜಾಬ್ ನ ರೈತರು ಪಾಣಿಪತ್ ಟೋಲ್ ಪ್ಲಾಜಾ ಮತ್ತು ಕರ್ನಲ್ ನಲ್ಲಿ ಜಮಾಯಿಸಿರುವುದರಿಂದ ದೆಹಲಿ ಪೊಲೀಸ್ ಸಿಬ್ಬಂದಿಯ ನಿಯೋಜನೆಯನ್ನು ವಿಸ್ತರಿಸಲಾಗಿದೆ. ಮರಳು ತುಂಬಿದ ಟ್ರಕ್ಕ್ ಗಳು ಮತ್ತು ಜಲ ಫಿರಂಗಿಗಳು ಮತ್ತು ಸಿಂಘು ಗಡಿಯಲ್ಲಿ ಬೇಲಿಗಳಿರುವ ಬ್ಯಾರಿಕೇಡ್ ಗಳನ್ನು ಪ್ರತಿಭಟನಾಕಾರರು ನಗರ ಪ್ರವೇಶಿಸದಂತೆ ಹಾಕಲಾಗಿದೆ.

ಪ್ರತಿಭಟನಾಕಾರರನ್ನು ದೆಹಲಿ ಪ್ರವೇಶಿಸಲು ಬಿಡುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com