ಡಿಸೆಂಬರ್ 3 ಏಕೆ? ಪರಿಸ್ಥಿತಿ ತಿಳಿಗೊಳಿಸಲು ಈಗಲೇ ರೈತರೊಂದಿಗೆ ಮಾತುಕತೆ ನಡೆಸಿ: ಕೇಂದ್ರಕ್ಕೆ ಅಮರಿದರ್ ಸಿಂಗ್ ಆಗ್ರಹ

ಡಿಸೆಂಬರ್ 3ರವರೆಗೆ ಏಕೆ ಕಾಯುತ್ತೀರಿ. ಈಗಾಗಲೇ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಈಗಲೇ ರೈತರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ. 
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್

ಚಂಡೀಗಢ: ಡಿಸೆಂಬರ್ 3ರವರೆಗೆ ಏಕೆ ಕಾಯುತ್ತೀರಿ. ಈಗಾಗಲೇ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಈಗಲೇ ರೈತರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೈತರ ಧ್ವನಿ ಹತ್ತಿಕ್ಕುವ ಪ್ರಯತ್ನಗಳಾಗಬಾರದು. ದೆಹಲಿ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸಲೂ ಕೂಡಲೇ ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ ಮಾತನಾಡಬೇಕು. ಪರಿಸ್ಥಿತಿ ಕೈಮೀರುತ್ತಿರುವಾಗ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಡಿಸೆಂಬರ್ 3ರವರೆಗೆ ಏಕೆ ಕಾಯಬೇಕು ಎಂದು ಪ್ರಶ್ನಿಸಿದ್ದಾರೆ. 

ಕೃಷಿ ಮಸೂದೆ ಕುರಿತು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರೊಂದಿಗೆ ಡಿಸೆಂಬರ್ 3 ರಂದು ಮಾತುಕತೆ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. 

ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಅಮರೀಂದರ್ ಸಿಂಗ್ ಅವರು, ರೈತರು ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಕೆಲಸಗಳು ಮಾಡಿಲ್ಲ. ಹಿಂಂಸಾಚಾರವನ್ನು ಸೃಷ್ಟಿಸಿಲ್ಲ. ಇಂತಹವರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕೇಂದ್ರ ಸರ್ಕಾರ ಕೂಡಲೇ ಅಂತ್ಯ ಹಾಡಬೇಕು ಎಂದು ಹೇಳಿದ್ದಾರೆ. 

ಇದೇ ವೇಳೆ ರೈತರ ಮೇಲೆ ಹರಿಯಾಣ ಪೊಲೀಸರು ಜಲಫಿರಂಗಿ ಹಾಗೂ ಅಶ್ರುವಾಯು ಬಳಕೆ ಮಾಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ದೇಶದ ರಾಜಧಾನಿಗೆ ತೆರಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು, ಧ್ವನಿ ಎತ್ತರುವ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಹಕ್ಕು ರೈತರಿಗಿದೆ. ಮಕ್ಕಳು, ಮಹಿಳೆಯರು ಹಾಗೂ ರೈತರ ಮೇಲೆ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಬಳಕೆ ಮಾಡಿರುವುದು ನಿಜಕ್ಕೂ ಆಘಾತವನ್ನು ತಂದಿದೆ. ದೇಶದ ಅನ್ನದಾತರ ಮೇಲೆ ಹರಿಯಾಣ ಸರ್ಕಾರದ ಹಿತಾಸಕ್ತಿ, ಕಾಳಜಿ ಎಷ್ಟಿದೆ ಎಂಬುದನ್ನು ಇದೇ ತೋರಿಸುತ್ತದೆ ಎಂದು ತಿಳಿಸಿದ್ದಾರೆ. 

ಪ್ರತೀಯೊಬ್ಬ ರೈತರ ಸಾಮಾನ್ಯ ಹಕ್ಕಾಗಿರುವ ಕನಿಷ್ಟ ಬೆಂಬಲ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಬೇಕು. ಇಂತಹ ಭರವಸೆಯನ್ನು ಮೌಖಿಕವಾಗಿಯಾದರೂ ಕೇಂದ್ರ ಸರ್ಕಾರವೇಕೆ ನೀಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. 

ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸದಸ್ಯರು ಅಮೃತಸರದಿಂದ ದೆಹಲಿಗೆ ಹೊರಡಲು ಶುಕ್ರವಾರ ತಯಾರಿ ನಡೆಸಿದ್ದಾರೆ. 4-5 ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಸಿಕೊಂಡು ನಾವೆಲ್ಲರೂ ದೆಹಲಿ ಕಡೆಗೆ ಹೋಗತ್ತಿದ್ದೇವೆ ಎಂದು ರೈತರು ತಿಳಿಸಿದ್ದಾರೆ.

ಇದರಂತೆ ಹರಿಯಾಣ-ದೆಹಲಿ ಸಿಂಘು ಗಡಿ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರನ್ನು ತಡೆಯಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಪೊಲೀಸರ ವರ್ತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com