'ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿದ್ದೇವೆ, ಇಂದು ನಮ್ಮನ್ನು ಉಗ್ರರಂತೆ ನೋಡುತ್ತಿದ್ದಾರೆ': ರೈತ ಭೀಮ್ ಸಿಂಗ್ ಅಳಲು

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿಯ ಬುರಾರಿಯ ನಿರಂಕರಿ ಮೈದಾನದಲ್ಲಿ ಸಾವಿರಾರು ರೈತರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ 72 ವರ್ಷದ ಉತ್ತರ ಪ್ರದೇಶದ ರೈತ ಭೀಮ್ ಸಿಂಗ್ ಕೂಡ ಒಬ್ಬರು. 
ಪೊಲೀಸ್ ಬ್ಯಾರಿಕೇಡ್ ಮುರಿದು ಒಳನುಗ್ಗಲು ಪ್ರತಿಭಟನಾಕಾರರು ಯತ್ನಿಸುತ್ತಿರುವುದು
ಪೊಲೀಸ್ ಬ್ಯಾರಿಕೇಡ್ ಮುರಿದು ಒಳನುಗ್ಗಲು ಪ್ರತಿಭಟನಾಕಾರರು ಯತ್ನಿಸುತ್ತಿರುವುದು

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿಯ ಬುರಾರಿಯ ನಿರಂಕರಿ ಮೈದಾನದಲ್ಲಿ ಸಾವಿರಾರು ರೈತರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ 72 ವರ್ಷದ ಉತ್ತರ ಪ್ರದೇಶದ ರೈತ ಭೀಮ್ ಸಿಂಗ್ ಕೂಡ ಒಬ್ಬರು. 

ಅವರ ಪುತ್ರ ಸೇನೆಯಲ್ಲಿದ್ದು ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯಲ್ಲದೆ ಖಲಿಸ್ತಾನದ ಉಗ್ರಗಾಮಿಗಳು ರೈತರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ, ಅವರ ಪ್ರಚೋದನೆಯಿಂದ ರೈತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂಬುದು ಈ ವಯೋವೃದ್ಧನನ್ನು ಇನ್ನಷ್ಟು ಸಿಟ್ಟಿಗೇಳುವಂತೆ ಮಾಡಿದೆ. 

''ನನ್ನ ಮಗ ಅಲ್ಲಿ ಗಡಿಯಲ್ಲಿ ದೇಶವನ್ನು ಕಾಯುತ್ತಿದ್ದಾನೆ. ಇಲ್ಲಿ ಆತನ ತಂದೆಯಾದ ನನ್ನನ್ನು ಭಯೋತ್ಪಾದಕನ, ಅಪರಾಧಿ ರೀತಿ ನೋಡುತ್ತಿದ್ದಾರೆ, ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ'' ಎಂದು ಭೀಮ್ ಸಿಂಗ್ ದೆಹಲಿಯಲ್ಲಿ ನಿಂತು ತಮ್ಮ ಆಕ್ರೋಶ, ಅಸಹನೆ ಹೊರಹಾಕುತ್ತಿದ್ದಾರೆ.

ನನ್ನ ಮಗ ಮಾತ್ರವಲ್ಲ, ನನ್ನ ಅಳಿಯ ಕೂಡ ಸೇನೆಯಲ್ಲಿದ್ದಾನೆ, ಆದರೆ ಇಲ್ಲಿ ಅವರ ಕುಟುಂಬವೆಲ್ಲ ಹಸಿವು, ಸಾಲದಿಂದ ನರಳುತ್ತಿದೆ. ಕೇಂದ್ರ ಸರ್ಕಾರ ಮೂರು ಕೃಷಿ ವಿರೋಧಿ ಕಾನೂನುಗಳನ್ನು ಹೇರಿದ್ದು ನಮಗೆ ಜೀವನಕ್ಕೆ ಕಷ್ಟವಾಗಿದೆ ಎಂದು ಉತ್ತರ ಪ್ರದೇಶದ ಬಿಜ್ನೊರ್ ಮೂಲದ ಭೀಮ್ ಸಿಂಗ್ ಹೇಳುತ್ತಾರೆ.

ಪಂಜಾಬ್ ನಲ್ಲಿ ಭೀಮ್ ಸಿಂಗ್ ಕುಟುಂಬ ಕಬ್ಬು, ಗೋಧಿ, ಬಾರ್ಲಿ ಬೆಳೆಯುತ್ತಾರೆ. ಕಳೆದ 14 ತಿಂಗಳಿನಿಂದ ಕಾರ್ಪೊರೇಟ್ ಕೃಷಿ ಮಸೂದೆಯಿಂದಾಗಿ ಯಾವುದೇ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಸರ್ಕಾರ ಈಗಾಗಲೇ ಕೆಲವು ವಸ್ತುಗಳನ್ನು ಅಗತ್ಯ ಸಾಮಗ್ರಿಗಳು ಪಟ್ಟಿಯಿಂದ ತೆಗೆದುಹಾಕಿದೆ ಎಂದರು.

ತಮ್ಮ ಬದುಕಿನ ಸಂಕಷ್ಟವನ್ನು ಹಂಚಿಕೊಂಡ ಭೀಮ್ ಸಿಂಗ್, ನಾವು ನಾಲ್ವರು ಒಡಹುಟ್ಟಿದವರು, ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ದೇಶಸೇವೆಗೆ ಕಳುಹಿಸಿದ್ದಾರೆ. ಇಲ್ಲಿ ನಾವು ದೇಶದ ಜನತೆಗೆ ತಿನ್ನಲು ಭತ್ತ, ಗೋಧಿ, ಧಾನ್ಯಗಳು, ಕಾಳುಗಳನ್ನು ಬೆಳೆಯುತ್ತೇವೆ. ಇಂಥವರನ್ನು ಇಂದು ಇಲ್ಲಿ ಬಯಲಿನಲ್ಲಿ ಬಂಧಿಸಿದ್ದಾರೆ, ನಾವೇನು ಅಪರಾಧ ಮಾಡಿದ್ದೇವೆಯೇ ನಾವು ಭಯೋತ್ಪಾದಕೇ ಎಂದು ಭೀಮ್ ಸಿಂಗ್ ಕೇಳುತ್ತಾರೆ.

ಕೇಂದ್ರ ಸರ್ಕಾರ ನೂತನ ಕೃಷಿ ಮಸೂದೆಯನ್ನು ಹಿಂತೆಗೆದುಕೊಂಡು ನಮ್ಮ ಬೇಡಿಕೆ ಈಡೇರಿಸದಿದ್ದರೆ ನಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಬೀದಿಗೆ ಬರುತ್ತಾರೆ. ಉತ್ತರ ಪ್ರದೇಶದಲ್ಲಿ ನಾವು ಖಂಡಿತವಾಗಿಯೂ ರಸ್ತೆತಡೆ ಮಾಡುತ್ತೇವೆ. ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ, ಆದರೆ ನಮ್ಮ ಬದುಕು ಉಳಿಯಲು ಸರ್ಕಾರ ಏನು ಮಾಡುತ್ತಿದೆ ಎಂದು ತೋರಿಸಲು ಖಂಡಿತವಾಗಿಯೂ ನಮಗೆ ರಸ್ತೆತಡೆ ಮಾಡಿ ಪ್ರತಿಭಟನೆ ಮಾಡದೆ ಬೇರೆ ಉಪಾಯವಿಲ್ಲ ಎಂದರು.

ಖಲಿಸ್ತಾನೀಯರು ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವನ್ನು ನಿರಾಕರಿಸುವ ರೈತರು ನಾವು ಉಗ್ರರಲ್ಲ, ಉಗ್ರರನ್ನು ಬೆಂಬಲಿಸುವುದೂ ಇಲ್ಲ, ನಾವು ನಮ್ಮ ಮಕ್ಕಳನ್ನು ದೇಶಸೇವೆಗೆ ಕಳುಹಿಸುತ್ತಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com