ಭಾರತೀಯ ಪೋಸ್ಟ್ ಗಳ ಗುರಿಯಾಗಿಸಿಕೊಂಡು ಮತ್ತೆ ಪಾಕ್ ಸೇನೆ ದಾಳಿ, ಭಾರತೀಯ ಸೈನಿಕರಿಂದ ಪ್ರತಿದಾಳಿ
ಇಂಡೋ-ಪಾಕ್ ಗಡಿ ಎಲ್ ಒಸಿಯಲ್ಲಿ ಮತ್ತೆ ಪಾಕಿಸ್ತಾನ ಸೇನೆ ಉದ್ಧಟತನ ಮುಂದುವರೆದಿದ್ದು, ಮತ್ತೆ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
Published: 29th November 2020 04:50 PM | Last Updated: 29th November 2020 04:50 PM | A+A A-

ಸಂಗ್ರಹ ಚಿತ್ರ
ಶ್ರೀನಗರ: ಇಂಡೋ-ಪಾಕ್ ಗಡಿ ಎಲ್ ಒಸಿಯಲ್ಲಿ ಮತ್ತೆ ಪಾಕಿಸ್ತಾನ ಸೇನೆ ಉದ್ಧಟತನ ಮುಂದುವರೆದಿದ್ದು, ಮತ್ತೆ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಗಡಿಯಲ್ಲಿನ ಭಾರತೀಯ ಸೇನೆಯ ಫಾರ್ವರ್ಡ್ ಪೋಸ್ಟ್ ಗಳು ಹಾಗೂ ಗಡಿಯಂಚಿನ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ದಾಳಿ ನಡೆಸಿದ್ದು, ಇದಕ್ಕೆ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿವೆ.
ಕಥುವಾ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ಸಮೀಪದ ಹೀರಾನಗರ ಸೆಕ್ಟರ್ ವ್ಯಾಪ್ತಿಯ ಪನ್ಸಾರ್, ಮನ್ಯಾರಿ ಹಾಗೂ ಕರೋಲ್ ಕೃಷ್ಣಾ ಪ್ರದೇಶಗಳಲ್ಲಿ ಪಾಕಿಸ್ತಾನದ ಪಡೆಗಳು ಗುಂಡಿನ ದಾಳಿ ಆರಂಭಿಸಿದವು. ಗಡಿ ಭದ್ರತಾ ಪಡೆಯ ಯೋಧರು ಪ್ರತಿ ದಾಳಿ ನಡೆಸಿ, ತಕ್ಕ ಉತ್ತರ ನೀಡಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಿಂದಾಗಿ ಗ್ರಾಮದ 12ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದೂ ಅಧಿಕಾರಿಗಳು ಹೇಳಿದರು.
'ಎರಡೂ ದೇಶಗಳ ಪಡೆಗಳ ನಡುವೆ ಭಾನುವಾರ ನಸುಕಿನ 4.15ರ ವರೆಗೂ ಗುಂಡಿನ ಚಕಮಕಿ ನಡೆಯಿತು. ನಮ್ಮ ಕಡೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ಇದೇ ವಿಚಾರವಾಗಿ ತಮ್ಮ ಆತಂಕ ವ್ಯಕ್ತಪಡಿಸಿರುವ ಮನ್ಯಾರಿ ಗ್ರಾಮದ ನಿವಾಸಿ ಧರಮ್ ಪಾಲ್, 'ಅಂಗೈಯಲ್ಲಿ ಜೀವ ಹಿಡಿದುಕೊಂಡೇ ದಿನ ದೂಡುತ್ತಿದ್ದೇವೆ. ಪಾಕಿಸ್ತಾನ ನಡೆಸುವ ಗುಂಡಿನ ದಾಳಿಯಿಂದ ಪಾರಾಗುವ ಸಲುವಾಗಿ ನಾವು ಭೂಗತ ಬಂಕರ್‌ಗಳಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದೇವೆ' ಎಂದು ಹೇಳಿದರು.