ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು

ಕಲಾಪಕ್ಕೆ ಅಡ್ಡಿ: ಆಂಧ್ರ ವಿಧಾನಸಭೆಯಿಂದ ಚಂದ್ರಬಾಬು ನಾಯ್ಡು, ಇತರ 12 ಶಾಸಕರು ಅಮಾನತು

ವಿಧಾನಸಭೆಯ ಚಳಿಗಾಲ ಅಧಿವೇಶನದ ಮೊದಲ ದಿನವೇ ಕಲಾಪಕ್ಕೆ ಅಡ್ಡಿಪಡಿಸಿದ ಸದನದ ಬಾವಿಗೆ ನುಗ್ಗಿ ಕೋಲಾಹಲ ಸೃಷ್ಟಿಸಿದ ಪ್ರತಿಪಕ್ಷ ನಾಯಕ ಎನ್ ಚಂದ್ರಬಾಬು ನಾಯ್ಡು ಹಾಗೂ ಇತರ 12 ಟಿಡಿಪಿ ಶಾಸಕರನ್ನು ಒಂದು ದಿನ ಅಮಾನತುಗೊಳಿಸಲಾಗಿದೆ.

ವಿಜಯವಾಡ: ವಿಧಾನಸಭೆಯ ಚಳಿಗಾಲ ಅಧಿವೇಶನದ ಮೊದಲ ದಿನವೇ ಕಲಾಪಕ್ಕೆ ಅಡ್ಡಿಪಡಿಸಿದ ಸದನದ ಬಾವಿಗೆ ನುಗ್ಗಿ ಕೋಲಾಹಲ ಸೃಷ್ಟಿಸಿದ ಪ್ರತಿಪಕ್ಷ ನಾಯಕ ಎನ್ ಚಂದ್ರಬಾಬು ನಾಯ್ಡು ಹಾಗೂ ಇತರ 12 ಟಿಡಿಪಿ ಶಾಸಕರನ್ನು ಒಂದು ದಿನ ಅಮಾನತುಗೊಳಿಸಲಾಗಿದೆ.

ಟಿಡಿಪಿ ಸದಸ್ಯೆ ನಿಮ್ಮಲಾ ರಮಾನೈದು ಅವರು ನಿವಾರ್ ಚಂಡಮಾರುತದಿಂದ ಉಂಟಾದ ಹಾನಿ ಮತ್ತು ಪರಿಹಾರ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು, ನಷ್ಟದ ಕುರಿತು ಡಿಸೆಂಬರ್ 15 ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಸಬ್ಸಿಡಿ ರೂಪದಲ್ಲಿ ಡಿಸೆಂಬರ್ 31 ರೊಳಗೆ ಪರಿಹಾರವನ್ನು ಪಾವತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು ಮೈಕ್ ನೀಡುವಂತೆ ಸ್ಪೀಕರ್ ಗೆ ಒತ್ತಾಯಿಸಲಾಯಿತು. ಆದರೆ ಅವರ ಪಕ್ಷದ ಸದಸ್ಯ ರಮಾನೈದು ಮಾತನಾಡುತ್ತಿರುವುದರಿಂದ ಇದನ್ನು ನಿರಾಕರಿಸಲಾಯಿತು. ಇದರಿಂದಾಗಿ ಟಿಡಿಪಿ ಸದಸ್ಯರು ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಇದರಿಂದ ಕೋಪಗೊಂಡ ಚಂದ್ರಬಾಬು ನಾಯ್ಡು ಅವರು ಸ್ಪೀಕರ್ ಕುರ್ಚಿಯ ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ಚಂದ್ರಬಾಬು ನಾಯ್ಡು ಅವರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ, ನಾಯ್ಡು ಅವರು ತಮ್ಮ ಪಕ್ಷದ ಸದಸ್ಯರೊಬ್ಬರು ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿ ಅಡ್ಡಿಪಡಿಸಲು ಯತ್ನಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. 

ಪ್ರತಿಭಟನೆ ಕೈಬಿಟ್ಟು ವಾಪಸ್ ಹೋಗಿ ಕುಳಿತುಕೊಳ್ಳಿ ಎಂದು ಸ್ಪೀಕರ್ ಪದೇಪದೆ ಮನವಿ ಮಾಡಿದರೂ ಒಪ್ಪದ ಚಂದ್ರಬಾಬು ನಾಯ್ಡು ಹಾಗೂ ಇತರೆ 12 ಶಾಸಕರನ್ನು ಅಮಾನತುಗೊಳಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com