5ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ಅಸ್ತವ್ಯಸ್ತ; ಟಿಕ್ರಿ, ಸಿಂಘು ಗಡಿ ಬಂದ್
ಕೇಂದ್ರ ಸರ್ಕಾರ ಜಾರಿಗೆ ತಂದಿರು ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಸೋಮವಾರ 5ನೇ ದಿನಕ್ಕೆ ಕಾಲಿಟ್ಟಿದೆ.
Published: 30th November 2020 01:28 PM | Last Updated: 30th November 2020 02:27 PM | A+A A-

ಸಿಂಘು ಗಡಿ ಪ್ರದೇಶದಲ್ಲಿರುವ ಸಾವಿರಾರು ರೈತರು
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರು ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಸೋಮವಾರ 5ನೇ ದಿನಕ್ಕೆ ಕಾಲಿಟ್ಟಿದೆ.
ರಾಷ್ಟ್ರ ರಾಜಧಾನಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಷ್ಟ್ರ ರಾಜಧಾನಿ ಪ್ರವೇಶದ ಐದು ಪ್ರವೇಶದ್ವಾರಗಳನ್ನು ಬಂದ್ ಮಾಡುವುದಾಗಿ ಪ್ರತಿಭಟನಾ ನಿರತ ರೈತರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದೇಶದ ವಿವಿಧ ಮೂಲಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದುಕೊಂಡಿದ್ದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದಿದ್ದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಗಳಲ್ಲಿಯೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಈ ನಡುವೆ ರೈತರ ಪ್ರತಿಭಟನೆಗೆ ವಿವಿಧ ಭಾಗಗಳಲ್ಲಿರುವ ರೈತರೂ ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ದೆಹಲಿಗೆ ಸಮೀಪ ಇರುವ ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಂದ ಬರುವ ರಸ್ತೆಗಳಲ್ಲಿ ರೈತರನ್ನು ತಡೆಹಿಡಿದಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಇಂದು ಗುರುನಾನಕ್ ಜಯಂತಿ, ಸಿಖ್ ಸಮುದಾಯದ ಪುಣ್ಯದಿನವಾಗಿದ್ದು, ಸಿಕ್ಖರಿಗೆ ಪ್ರಮುಖ ಹಬ್ಬವಾಗಿದೆ. ಹಬ್ಬದ ದಿನವಾದರೂ ಪ್ರತಿಭಟನೆ ಕೈಬಿಡದ ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿ ಪ್ರವೇಶಿಸುವ ಸಿಂಘು ಗಡಿ ಪ್ರದೇಶದಿಂದಲೇ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದೀಗ ಸಿಂಘು ಗಡಿಯನ್ನು ಬಂದ್ ಮಾಡಿರುವ ಪೊಲೀಸರು ಅಲ್ಲಿನ ಸಂಚಾರ ವ್ಯವಸ್ಥೆಗೆ ಬೇರೆಡೆಗೆ ವರ್ಗಾಯಿಸಿದ್ದಾರೆ. ಇದಲ್ಲದೆ ಟಿಕ್ರಿ ಗಡಿ ಪ್ರದೇಶದಲ್ಲೂ ಸಂಚಾರ ವ್ಯವಸ್ಥೆಯನ್ನು ಬೇರೆಡೆಗೆ ವರ್ಗಾಯಿಸಿದ್ದಾರೆಂದು ವರದಿಗಳು ತಿಳಿಸಿವೆ.
ಪ್ರಸ್ತುತ ಸ್ಥಳದಲ್ಲಿ ಶಾಂತಿಯುತ ವಾತಾವರಣವಿದೆ. ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಉದ್ದೇಶವಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸುರೇಂದ್ರ ಯಾದವ್ ಅವರು ಹೇಳಿದ್ದಾರೆ.
ನಮಗೆ ಯಾವುದೇ ರೀತಿಯ ಸಮಸ್ಯೆಗಳಾಗುತ್ತಿಲ್ಲ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆ. ರೈತರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಬಿಟ್ಟು ಬೇರೆಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.