ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ: ಪ್ರಧಾನಿ ಸೇರಿ ಗಣ್ಯರಿಂದ ನಮನ

ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 117ನೇ ಜನ್ಮದಿನ ಇಂದು. ಈ ಸಂದರ್ಭದಲ್ಲಿ ದೇಶದ ನಾಯಕರು ಅವರನ್ನು ಸ್ಮರಿಸಿದ್ದಾರೆ.
ವಿಜಯ ಘಾಟ್ ನಲ್ಲಿ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ಲಾಲ್ ಬಹದ್ದೂರ್ ಶಾಸ್ತ್ರಿ ಪುತ್ರರಿಂದ ಗೌರವ ನಮನ
ವಿಜಯ ಘಾಟ್ ನಲ್ಲಿ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ಲಾಲ್ ಬಹದ್ದೂರ್ ಶಾಸ್ತ್ರಿ ಪುತ್ರರಿಂದ ಗೌರವ ನಮನ

ನವದೆಹಲಿ: ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 117ನೇ ಜನ್ಮದಿನ ಇಂದು. ಈ ಸಂದರ್ಭದಲ್ಲಿ ದೇಶದ ನಾಯಕರು ಅವರನ್ನು ಸ್ಮರಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜಯ ಘಾಟ್ ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

ಪ್ರಧಾನಿ ತಮ್ಮ ಸಂದೇಶದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ವಿನಯವಂತ ಮತ್ತು ದೃಢ ನಿಲುವಿನ ವ್ಯಕ್ತಿಯಾಗಿದ್ದರು. ಸರಳತೆಯ ಸಾಕಾರದಂತಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಈ ದೇಶದ ಕಲ್ಯಾಣಕ್ಕಾಗಿ ಬದುಕಿದರು. ಅವರು ಭಾರತಕ್ಕಾಗಿ ಮಾಡಿದ ಕೆಲಸಗಳನ್ನು ಅತ್ಯಂತ ಕೃತಜ್ಞತೆಯಿಂದ ಅವರ ಜಯಂತಿ ಸಂದರ್ಭದಲ್ಲಿ ನೆನೆಯುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಲಾಲ್ ಬಹದ್ದೂರ್ ಶಾಸ್ತ್ರಿಗಳ ಪುತ್ರರಾದ ಸುನಿಲ್ ಶಾಸ್ತ್ರಿ ಮತ್ತು ಅನಿಲ್ ಶಾಸ್ತ್ರಿ ಸಹ ಇಂದು ಬೆಳಗ್ಗೆ ವಿಜಯ್ ಘಾಟ್ ಗೆ ತೆರಳಿ ಗೌರವ ನಮನ ಸಲ್ಲಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿ: 1904ರ 2ನೇ ಅಕ್ಟೋಬರ್ ದಂದು ಅಂದಿನ ಬ್ರಿಟಿಷ್ ಭಾರತದ ಇಂದಿನ ಉತ್ತರ ಪ್ರದೇಶದ ಆಗ್ರಾ ಬಳಿ ಮುಘಲ್ ಸರಾಯ್ ಯಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ದೇಶ, ದೇಶಪ್ರೇಮ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಪಾರ ತುಡಿತ ಹೊಂದಿದ್ದ ಶಾಸ್ತ್ರಿಗಳು, ಹಾಲಿನ ಉತ್ಪಾದನೆ ಮತ್ತು ಪೂರೈಕೆ ಬಗ್ಗೆ ರಾಷ್ಟ್ರವ್ಯಾಪಿ ಅಭಿಯಾನ ಕೈಗೊಂಡಿದ್ದರು.

ಅಸಹಕಾರ ಚಳವಳಿಯಲ್ಲಿ ಭಾಗಿಯಾದರು. ಲಾಲ್ ಬಹದ್ದೂರ್ ಶಾಸ್ತ್ರಿಗಳು 1965ರಲ್ಲಿ ಹಸಿರು ಕ್ರಾಂತಿಗೆ ಪ್ರೇರೇಪಣೆ ನೀಡಿದ್ದರು. ಇದರಿಂದ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಆಹಾರ ಉತ್ಪಾದನೆ ಹೆಚ್ಚಾಯಿತು. ಸ್ವಾಮಿ ವಿವೇಕಾನಂದರ, ಗಾಂಧಿಯವರ ಮತ್ತು ಆನ್ನಿ ಬೆಸೆಂಟ್ ರವರ ವಿಚಾರಧಾರೆಗಳಿಂದ ಶಾಸ್ತ್ರಿಗಳು ಪ್ರಭಾವಿತರಾಗಿದ್ದರು. ನಂತರ 1920ರಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಗೆ ಸೇರಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಪ್ರಮುಖ ಹುದ್ದೆ ವಹಿಸಿದ್ದರು.

ಸ್ವಾತಂತ್ರ್ಯ ಸಿಕ್ಕಿದ ನಂತರ 1947ರಲ್ಲಿ ಭಾರತ ಸರ್ಕಾರಕ್ಕೆ ಸೇರ್ಪಡೆಯಾಗಿ ನೆಹರೂರವರ ಸಂಪುಟದಲ್ಲಿ ಮೊದಲಿಗೆ ರೈಲ್ವೆ ಸಚಿವ ಹುದ್ದೆ ವಹಿಸಿಕೊಂಡರು. ನಂತರ ಗೃಹ ಸಚಿವ ಹುದ್ದೆ ಸೇರಿದಂತೆ ಪ್ರಮುಖ ಖಾತೆಗಳು ಅವರಿಗೆ ಒಲಿದು ಬಂದವು. 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ದೇಶವನ್ನು ಮುನ್ನಡೆಸಿದ್ದರು. ಯುದ್ಧದ ಸಂದರ್ಭದಲ್ಲಿ ಜೈ ಜವಾನ್, ಜೈ ಕಿಸಾನ್ ಘೋಷಣೆ ಜನಪ್ರಿಯವಾಯಿತು. ನಂತರ ಯುದ್ಧ 1966ರ ಜನವರಿ 10ರಂದು ತಾಷ್ಕೆಂಟ್ ಒಪ್ಪಂದದೊಂದಿಗೆ ಮುಕ್ತಾಯವಾಯಿತು.

ಅವರು ತಾಷ್ಕೆಂಟ್ ನಲ್ಲಿದ್ದಾಗಲೇ ಮರುದಿನ ನಿಗೂಢ ರೀತಿಯಲ್ಲಿ ಮೃತಪಟ್ಟರು. ಹೃದಯಾಘಾತದಿಂದ ನಿಧನರಾದರು ಎಂದು ಮರಣೋತ್ತರ ವರದಿ ಹೇಳಿದರೂ ಕೂಡ ಅವರ ಕುಟುಂಬಸ್ಥರು ಅದನ್ನು ಒಪ್ಪಿಕೊಂಡಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಒಲಿದು ಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com