ಅಟಲ್ ಟನಲ್ ಲೋಕಾರ್ಪಣೆ: ಪ್ರಗತಿಯ ಹಾದಿಯಲ್ಲಿ ಸುರಂಗವು ಲಡಾಖ್‌ಗೆ ಹೊಸ ಜೀವಸೆಲೆಯಾಗಲಿದೆ- ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ 9.02 ಕಿಲೋ ಮೀಟರ್ ಉದ್ದದ ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಅಟಲ್ ಸುರಂಗ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ.
ಅಟಲ್ ಸುರಂಗ ಹೆದ್ದಾರಿಯನ್ನು ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಅಟಲ್ ಸುರಂಗ ಹೆದ್ದಾರಿಯನ್ನು ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ರೋಹ್ಟಾಂಗ್ (ಹಿಮಾಚಲ ಪ್ರದೇಶ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ 9.02 ಕಿಲೋ ಮೀಟರ್ ಉದ್ದದ ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಅಟಲ್ ಸುರಂಗ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ.

ಈ ಸುರಂಗ ಮಾರ್ಗ ಮನಾಲಿಯಿಂದ ಲೇಹ್-ಸ್ಟಿತಿ ಕಣಿವೆಯನ್ನು ಸಂಪರ್ಕಿಸುತ್ತಿದ್ದು, ಇದು ವಿಶ್ವದ ಅತ್ಯಂತ ಉದ್ದ ಹೆದ್ದಾರಿ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದೆ.ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕರಿಗೆ ಮನಾಲಿ ಮತ್ತು ಲೇಹ್ ಮಧ್ಯೆ 46 ಕಿಲೋ ಮೀಟರ್ ದೂರದ 5 ಗಂಟೆಗಳ ಪ್ರಯಾಣ ಕಡಿತವಾಗಲಿದೆ.

ಲಡಾಕ್ ಗಡಿಯಲ್ಲಿ ಸೇನಾಪಡೆಗಳು ಮತ್ತು ಕಾಲಾಳುಪಡೆ ಯುದ್ಧ ವಾಹನಗಳ ಚಲನವಲನಕ್ಕೆ ಈ ಹೆದ್ದಾರಿ ಸುರಂಗ ಮಾರ್ಗದಿಂದ ಬಹಳ ಉಪಯೋಗವಾಗುವುದಲ್ಲದೆ ಪ್ರವಾಸೋದ್ಯಮ, ಚಳಿಗಾಲದ ಕ್ರೀಡೆಗಳಿಗೆ ಸಹ ಉತ್ತೇಜನ ಸಿಗಲಿದೆ. ಹಿಮಾಲಯದ ಪಿರ್ ಪಂಜಲ್ ವ್ಯಾಪ್ತಿಯಲ್ಲಿ ಸುರಂಗವನ್ನು ಸಮುದ್ರಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿ ಡ್ರಿಲ್ ಮಾಡಿ ಮತ್ತು ನ್ಯೂ ಆಸ್ಟ್ರಿಯಾ ಟ್ಯೂನಲ್ಲಿಂಗ್ ಮಾದರಿ ಮೂಲಕ ಸ್ಫೋಟಿಸಿ ನಿರ್ಮಿಸಲಾಗಿದೆ. ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದ್ದು ಈ ಸುರಂಗ ಮಾರ್ಗದ ನಿರ್ಮಾಣ ವೆಚ್ಚ 4 ಸಾವಿರ ಕೋಟಿ ರೂಪಾಯಿಗಳಾಗಿದೆ, ವರ್ಷವಿಡೀ ಇದು ಸಂಚಾರಕ್ಕೆ ಮುಕ್ತವಾಗಿರುತ್ತದೆ.

ಹೆದ್ದಾರಿ ಸುರಂಗ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಗಡಿಭಾಗದ ಮೂಲ ಸೌಕರ್ಯಕ್ಕೆ ಅಟಲ್ ಸುರಂಗ ಹೊಸ ಶಕ್ತಿಯನ್ನು ನೀಡಲಿದೆ. ವಿಶ್ವದರ್ಜೆಯ ಗುಣಮಟ್ಟದ ಗಡಿ ಸಂಪರ್ಕಕ್ಕೆ ಇದು ಉತ್ತಮ ಉದಾಹರಣೆ. ಗಡಿಭಾಗದ ಮೂಲಸೌಕರ್ಯಗಳನ್ನು ಹೆಚ್ಚಿಸಲು ದೀರ್ಘಕಾಲದಿಂದ ಬೇಡಿಕೆಯಿತ್ತು, ಆದರೆ ಯೋಜನೆ ಸಾಕಾರಗೊಳ್ಳುತ್ತಿರಲಿಲ್ಲ, ಮಧ್ಯದಲ್ಲಿಯೇ ಕೆಲಸ ನಿಂತುಹೋಗುತ್ತಿತ್ತು, ಇದೀಗ ಅಟಲ್ ಸುರಂಗ ಹೆದ್ದಾರಿ ಸಾಕಾರಗೊಂಡಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಗಡಿಭಾಗಗಳಲ್ಲಿ ಸಂಪರ್ಕ ಸೌಕರ್ಯ ಹೆಚ್ಚಿದರೆ ಅದರಿಂದ ದೇಶದ ಭದ್ರತೆ ಹೆಚ್ಚಾಗುತ್ತದೆ. ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಈ ಸುರಂಗ ಹೆದ್ದಾರಿಗೆ 2002ರಲ್ಲಿಯೇ ಶಂಕು ಸ್ಥಾಪನೆ ನೆರವೇರಿಸಿದ್ದರು. 2013-14ರವರೆಗೆ ಸುರಂಗದ 1,300 ಮೀಟರ್ ವರೆಗೆ ಮಾತ್ರ ನಿರ್ಮಾಣದ ಪ್ರಗತಿ ಸಾಗಿತ್ತು. 2014ರ ನಂತರ ಸುರಂಗ ಹೆದ್ದಾರಿಯ ಯೋಜನೆ ತ್ವರಿತವಾಗಿ ಸಾಗಿ ಇದೀಗ ಉದ್ಘಾಟನೆಯಾಗಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.

ಗಡಿಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದರ ಪ್ರಯೋಜನ ನಮ್ಮ ಸೇನೆಯ ಯೋಧರಿಗೆ ಮತ್ತು ಸಾಮಾನ್ಯ ಜನತೆಗೆ ಕೂಡ ಸಿಗಲಿದೆ. ದೇಶದ ಭದ್ರತೆಗಿಂತ ಮುಖ್ಯವಾದ ವಿಷಯ ಬೇರೊಂದಿಲ್ಲ. ಆದರೆ ಒಂದು ಸಮಯದಲ್ಲಿ ನಮ್ಮ ದೇಶದ ಭದ್ರತೆ ಹಿತಾಸಕ್ತಿ ವಿಷಯದಲ್ಲಿ ರಾಜಿ ಮಾಡಿಕೊಂಡದ್ದನ್ನು ನಾವು ನೋಡಿದ್ದೇವೆ ಎಂದರು.

ಹಲವು ಪ್ರಮುಖ ಇತರ ಯೋಜನೆಗಳನ್ನು ಸಹ ಅಟಲ್ ಸುರಂಗದಂತೆಯೇ ಪರಿಗಣಿಸಲಾಗಿದೆ. ಕಾರ್ಯಾತ್ಮಕವಾಗಿ ಲಡಾಕ್ ನ ದೌಲತ್ ಬೇಗ್ ಒಲ್ದಿ ಏರ್ ಸ್ಟ್ರಿಪ್ 40-45 ವರ್ಷಗಳಿಂದ ಮುಚ್ಚಲಾಗಿತ್ತು. ಇದನ್ನು ಮುಚ್ಚುವುದರ ಹಿಂದಿನ ಅಸಹಾಯಕತೆ ಏನಿತ್ತು, ಒತ್ತಡ ಏನಿದ್ದವು ಎಂದು ವಿವರವಾಗಿ ಹೇಳಲು ನಾನು ಹೋಗುವುದಿಲ್ಲ ಎಂದರು.

ಸುರಂಗ ಹೆದ್ದಾರಿಯ ಪ್ರಯೋಜನಗಳೇನು?: ಇಲ್ಲಿ ಇಷ್ಟು ವರ್ಷಗಳ ಕಾಲ ಸುರಂಗ ಮಾರ್ಗವಿಲ್ಲದಿದ್ದರಿಂದ ಅಧಿಕ ಹಿಮ, ಮಂಜು ಬೀಳುವಿಕೆಯಿಂದಾಗಿ ವರ್ಷದಲ್ಲಿ ಆರು ತಿಂಗಳು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ.

ಮನಾಲಿ ಮತ್ತು ಲೇಹ್ ಮಧ್ಯೆ 46 ಕಿಲೋ ಮೀಟರ್ ಉದ್ದದ ಪ್ರಯಾಣವನ್ನು ಸುರಂಗ ಮಾರ್ಗ ತಗ್ಗಿಸಲಿದ್ದು ನಾಲ್ಕೈದು ಗಂಟೆ ಪ್ರಯಾಣ ಸಮಯ ಉಳಿತಾಯವಾಗುತ್ತದೆ. ಪ್ರತಿದಿನ ಸುರಂಗ ಮೂಲಕ 3 ಸಾವಿರ ಕಾರುಗಳು, 1,500 ಟ್ರಕ್ ಗಳು ಸಂಚಾರ ಮಾಡಬಹುದು. ಈ ಸುರಂಗ ಮಾರ್ಗ ಲೇಹ್ ನ್ನು ಮಾತ್ರ ಸಂಪರ್ಕಿಸುವುದಲ್ಲದೆ ಲಹುಲ್-ಸ್ಪಿತಿ ಬುಡಕಟ್ಟು ಜಿಲ್ಲೆಗಳನ್ನು ಸಹ ಸಂಪರ್ಕಿಸುತ್ತದೆ.

ತುರ್ತು ಕ್ರಮಗಳು: ಸುರಂಗ ಹೆದ್ದಾರಿಯೊಳಗೆ ಪ್ರತಿ 500 ಮೀಟರ್ ಗಳಲ್ಲಿ ತುರ್ತು ನಿರ್ಗಮನವಿರುತ್ತದೆ. ಪ್ರತಿ 250 ಮೀಟರ್ ಗೆ ಸಿಸಿಟಿವಿ ಕ್ಯಾಮರಾದೊಂದಿಗೆ ದೂರ ಪ್ರಸಾರದ ವ್ಯವಸ್ಥೆಯಿದ್ದು, ಸ್ವಯಂಚಾಲಿತ ಪತ್ತೆಹಚ್ಚುವ ವ್ಯವಸ್ಥೆಯಿರುತ್ತದೆ. ಪ್ರತಿ 60 ಮೀಟರ್ ಗೆ ಅಗ್ನಿ ಶಾಮಕ ವ್ಯವಸ್ಥೆ, ಪ್ರತಿ 150 ಮೀಟರ್ ಗೆ ಟೆಲಿಫೋನ್ ವ್ಯವಸ್ಥೆ, ವಾಯು ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಪ್ರತಿ ಒಂದು ಕಿಲೋ ಮೀಟರ್ ಗೆ ಇರುತ್ತದೆ.

ಅಂದಿನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು 2010ರ ಜೂನ್ 28ರಂದು ಶಂಕುಸ್ಥಾಪನೆ ನೆರವೇರಿಸಿದ ನಂತರ ಸುರಂಗ ಹೆದ್ದಾರಿಯ ನಿರ್ಮಾಣ ಆರಂಭಗೊಂಡಿತು. ಭೂಗರ್ಭ ಇಲಾಖೆ ಸುರಂಗ ಹೆದ್ದಾರಿ ನಿರ್ಮಾಣಕ್ಕೆ 2,000ನೇ ಇಸವಿಯಲ್ಲಿ ಹಸಿರು ನಿಶಾನೆ ತೋರಿಸಿದ ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸುರಂಗ ಹೆದ್ದಾರಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದರು. ಇಲ್ಲಿ ಸುರಂಗ ಹೆದ್ದಾರಿ ನಿರ್ಮಾಣದ ಸಾಧ್ಯತೆ ಬಗ್ಗೆ 1900ರಲ್ಲಿಯೇ ಅಧ್ಯಯನ ಮಾಡಲಾಗಿತ್ತು.

ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿಯವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಗಡಿ ರಸ್ತೆ ಸಂಸ್ಥೆಯ ಡಿಜಿ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಭಾಗವಹಿಸಿದ್ದರು.

ಉದ್ಘಾಟನೆ ನಂತರ ಪ್ರಧಾನಿ ಮೋದಿ ಸುರಂಗ ಮಾರ್ಗದ ಸುತ್ತ ಸಂಚಾರ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com