ಮೋದಿ ಸರ್ಕಾರ ಅಂಬಾನಿ, ಅದಾನಿಯಂತ ದೊಡ್ಡ ಉದ್ಯಮಿಗಳ ನಿಯಂತ್ರಣದಲ್ಲಿದೆ: ರಾಹುಲ್ ಗಾಂಧಿ ಆರೋಪ
ಪ್ರಧಾನಿ ನರೇಂದ್ರ ಮೋದಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ಸಹಾಯವಾಗುವ ಮಸೂದೆ, ಕಾನೂನುಗಳನ್ನು ತರುತ್ತಾರೆಯೇ ಹೊರತು ದೇಶದ ಬಡ ರೈತರಿಗಾಗಿ ಏನೂ ಮಾಡುತ್ತಿಲ್ಲ, ಮೋದಿ ಸರ್ಕಾರವನ್ನು ಅದಾನಿ, ಅಂಬಾನಿಯಂತಹ ದೊಡ್ಡ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Published: 04th October 2020 03:13 PM | Last Updated: 04th October 2020 03:24 PM | A+A A-

ರೈತರ ಜಮೀನು ರಕ್ಷಿಸಿ ಪ್ರತಿಭಟನೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ
ಬದ್ನಿ ಕಲನ್(ಪಂಜಾಬ್): ಪ್ರಧಾನಿ ನರೇಂದ್ರ ಮೋದಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ಸಹಾಯವಾಗುವ ಮಸೂದೆ, ಕಾನೂನುಗಳನ್ನು ತರುತ್ತಾರೆಯೇ ಹೊರತು ದೇಶದ ಬಡ ರೈತರಿಗಾಗಿ ಏನೂ ಮಾಡುತ್ತಿಲ್ಲ, ಮೋದಿ ಸರ್ಕಾರವನ್ನು ಅದಾನಿ, ಅಂಬಾನಿಯಂತಹ ದೊಡ್ಡ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅವರು ಇಂದು ಪಂಜಾಬ್ ನ ಮೊಗ ಜಿಲ್ಲೆಯ ಬದ್ನಿ ಕಲನ್ ನಿಂದ ಜತ್ಪುರಕ್ಕೆ ಟ್ರಾಕ್ಟರ್ ಮೆರವಣಿಗೆ ಮೂಲಕ ರೈತರ ಭೂಮಿ ರಕ್ಷಿಸುವ ಯಾತ್ರೆಗೆ ಚಾಲನೆ ನೀಡಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ಸೇರಿದಂತೆ ಕೃಷಿ ವಲಯದ ಸುಧಾರಣೆ ಮಸೂದೆಗಳನ್ನು ವಿರೋಧಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನ ಈ ದೇಶದ ರೈತರ ಜೀವನಕ್ಕೆ ಕಪ್ಪು ಚುಕ್ಕೆಯಾದ ಮಸೂದೆಗಳನ್ನು ತೆಗೆದುಹಾಕಿ ಕಸದ ಬುಟ್ಟಿಗೆ ಎಸೆಯುತ್ತೇವೆ ಎಂಬ ಭರವಸೆಯನ್ನು ನಾನು ಈ ಸಂದರ್ಭದಲ್ಲಿ ಕೊಡುತ್ತೇನೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆಯಿಂದ ಸಂತೋಷ, ತೃಪ್ತಿ ಹೊಂದಿದ್ದರೆ ದೇಶಾದ್ಯಂತ ಇಂದು ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದರು? ಪಂಜಾಬ್ ನಲ್ಲಿ ಪ್ರತಿಯೊಬ್ಬ ರೈತರೂ ಏಕೆ ವಿರೋಧಿಸುತ್ತಿದ್ದರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ, ಅದರಿಂದ ಜನರು ಕಷ್ಟಪಡುತ್ತಿರುವ ಸಮಯದಲ್ಲಿ ತರಾತುರಿಯಿಂದ ಈ ಮಸೂದೆಯನ್ನು ತರುವ ಅಗತ್ಯವೇನಿತ್ತು, ನಿಮಗೆ ಮಸೂದೆಯನ್ನು ಜಾರಿಗೆ ತರಬೇಕೆಂದಿದ್ದರೆ ಲೋಕಸಭೆ, ರಾಜ್ಯಸಭೆಗಳಲ್ಲಿ ಸಮಗ್ರವಾಗಿ ಚರ್ಚಿಸಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಪರವಾಗಿ ಕಾನೂನು ರೂಪಿಸಬೇಕಾಗಿತ್ತು. ಅದು ಬಿಟ್ಟು ಸದನದಲ್ಲಿ ಮುಕ್ತವಾಗಿ ಚರ್ಚೆ ನಡೆಸದೆ ಆತುರವಾಗಿ ಮಂಡಿಸಿ ಅನುಮೋದನೆ ಪಡೆಯುವ ಅಗತ್ಯವೇನಿತ್ತು ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.
ಮೋದಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಮತ್ತು ಆಹಾರ ಸಂಗ್ರಹಣೆಗೆ ಇತಿಶ್ರೀ ಹಾಡಲು ನೋಡುತ್ತಿದೆ ಎಂದು ಕೂಡ ಆರೋಪಿಸಿದರು.
#WATCH: Punjab: CM Captain Amarinder Singh, Congress leader Rahul Gandhi, party's state chief Sunil Jakhar take part in tractor yatra from Badhni Kalan to Jattpura as part of party's 'Kheti Bachao Yatra'. pic.twitter.com/TpXTpxcGCx
— ANI (@ANI) October 4, 2020