ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ: ಸಿಬಿಐನಿಂದ ತನಿಖೆ!

ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕೃತವಾಗಿ ತನಿಖಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಕೇಂದ್ರ ತನಿಖಾ ಸಂಸ್ಥೆ ಸಿಬಿಐ
ಕೇಂದ್ರ ತನಿಖಾ ಸಂಸ್ಥೆ ಸಿಬಿಐ

ಲಖನೌ: ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕೃತವಾಗಿ ತನಿಖಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಈ ಹಿಂದೆ ಹತ್ರಾಸ್ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ದಳ-ಸಿಬಿಐನಿಂದ ತನಿಖೆ ನಡೆಸಬೇಕೆಂದು ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು. ಈ ಸಂಬಂಧ ಮನವಿ ಪತ್ರ ಸಲ್ಲಿಸಿದ್ದ ಉತ್ತರ ಪ್ರದೇಶ ಸರ್ಕಾರ, ಈ ಪ್ರಕರಣದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ನಕಲಿ ಮತ್ತು ಸಂಗತಿಗಳನ್ನು  ಸೃಷ್ಟಿಸಲು ಯಾವುದೇ ಆಸ್ಪದ ನೀಡುವುದಿಲ್ಲ. ಈ ಘಟನೆ ಬಗ್ಗೆ ಸತ್ಯಾಂಶ ಹೊರಬರಬೇಕು. ಹೀಗಾಗಿ ಕೇಂದ್ರದ ಸ್ವತಂತ್ರ ತನಿಖಾ ಸಂಸ್ಥೆಯಿಂದಲೇ ಈ ಪ್ರಕರಣದ ತನಿಖೆ ನಡೆಸುವುದು ಸೂಕ್ತ ಎಂದು ಉತ್ತರಪ್ರದೇಶ ಸರ್ಕಾರ ಅಫಿಡೆವಿಟ್‍ನಲ್ಲಿ ತಿಳಿಸಿತ್ತು.

ಇದೀಗ ಸ್ವತಃ ಸಿಬಿಐ ಅಧಿಕಾರಿಗಳು ಹತ್ರಾಸ್ ಪ್ರಕರಣವನ್ನು ಅಧಿಕೃತವಾಗಿ ತನಿಖೆಗೆ ಸ್ವೀಕರಿಸಿದ್ದಾರೆ.

ಕಳೆದ ಸಪ್ಟೆಂಬರ್.14ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು. ಎರಡು ವಾರ ಸಾವು ಬದುಕಿನ ನಡುವೆ  ಹೋರಾಟ ನಡೆಸಿದ್ದ ಯುವತಿ ಸಪ್ಟೆಂಬರ್.29ರಂದು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಸಪ್ಟೆಂಬರ್.30ರ ಮಧ್ಯರಾತ್ರಿ 2.30ರ ಸಂದರ್ಭದಲ್ಲಿ ಪೊಲೀಸರೇ ಯುವತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು. ಇದು ಸಾರ್ವಜನಿಕರ ಮತ್ತು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ  ಕಾರಣವಾಗಿತ್ತು. ಅಲ್ಲದೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿಗೆ ವಿಪಕ್ಷಗಳಿಗೆ ಬಾಣವಾಗಿ ಮಾರ್ಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com