'ಯಾವ ಧರ್ಮ ಅಥವಾ ದೇವರು, ಜೀವ ಪಣಕ್ಕಿಟ್ಟು ಹಬ್ಬ ಆಚರಿಸಿ ಎಂದು ಹೇಳಿಲ್ಲ'

ಯಾವ ಧರ್ಮ ಅಥವಾ ದೇವರು, ಜೀವ ಪಣಕ್ಕಿಟ್ಟು ಹಬ್ಬ ಆಚರಿಸಿ ಎಂದು ಹೇಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಯಾವ ಧರ್ಮ ಅಥವಾ ದೇವರು, ಜೀವ ಪಣಕ್ಕಿಟ್ಟು ಹಬ್ಬ ಆಚರಿಸಿ ಎಂದು ಹೇಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ.

ದೇಶದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಜೋರಾಗಿರುವಂತೆಯೇ ಕೇಂದ್ರ ಆರೋಗ್ಯ ಇಲಾಖೆ ಹಬ್ಬಗಳ ಕುರಿತು ಎಚ್ಚರಿಕೆ ನೀಡಿದ್ದು, ಹಬ್ಬಗಳನ್ನು ಆಚರಿಸುವ ಕುರಿತು ದೇಶ ಬಾಂಧವರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಹಬ್ಬಗಳಿಗಾಗಿ ನಿಮ್ಮ  ಜೀವನವನ್ನು ಅಪಾಯಕ್ಕೆ ತಳ್ಳುವಂತೆ ಯಾವ ಧರ್ಮ ಅಥವಾ ದೇವರೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಹಬ್ಬಗಳ ಹೆಸರಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಮರೆಯದಿರುವಂತೆ ಜನರಿಗೆ ಮನವಿ ಮಾಡಿರುವ ಡಾ. ಹರ್ಷವರ್ಧನ್, ಸಾಮಾಜಿಕ ಅಂತರವನ್ನು ಚಾಚೂ ತಪ್ಪದೇ ಪಾಲಿಸುವಂತೆ ಸಲಹೆ ನೀಡಿದ್ದಾರೆ. ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸದೇ ಮನೆಯಲ್ಲೇ ಕುಟುಂಬಸ್ಥರೊಂದಿಗೆ ನೆಮ್ಮದಿಯಿಂದ ಆಚರಿಸಿ.  ಧರ್ಮದ ಮೇಲಿನ ನಿಮ್ಮ ನಂಬಿಕೆಯನ್ನು ಸಾಬೀತುಪಡಿಸಲು ಹೋಗಿ ಜೀವನವನ್ನು ಅಪಾಯಕ್ಕೆ ದೂಡಬೇಡಿ. ಯಾವ ಧರ್ಮವೂ ಜೀವನವನ್ನು ಅಪಾಯಕ್ಕೆ ತಳ್ಳಿ ಹಬ್ಬ ಆಚರಿಸಿ ಎಂದು ಹೇಳುವುದಿಲ್ಲ. ಧರ್ಮ ಹಾಗೂ ದೇವರ ಮೇಲಿನ ನಂಬಿಕೆ ಸಾಬೀತುಪಡಿಸಲು ವಿಜೃಂಭಣೆಯ ಹಬ್ಬದ ಆಚರಣೆಯ  ಅವಶ್ಯಕತೆಯಿಲ್ಲ ಎಂದು ಹರ್ಷವರ್ಧನ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಭಾರಿ ಪ್ರಮಾಣದ ಸೋಂಕಿತರ ಸಂಖ್ಯೆ ಕಂಡುಬರುತ್ತಿದೆ. ಇದಕ್ಕೆ ಓಣಂ ಸಂಭ್ರಮಾಚರಣೆ ಕೂಡ ಕಾರಣವಾಗಿರಬಹುದು. ಹಬ್ಬಗಳನ್ನು ಆಚರಿಸುವಾಗ ಕೊರೊನಾವೈರಸ್ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಲ್ಲಿ ನಾವು ಅಸಡ್ಡೆ ತೋರಿದರೆ, ದೇಶದ ಕೊರೋನಾ ಪರಿಸ್ಥಿತಿ  ಮತ್ತೆ ಹದಗೆಡುತ್ತದೆ ಮತ್ತು ಭಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಯಾವುದೇ ಧರ್ಮದ ಯಾವುದೇ ಧಾರ್ಮಿಕ ಮುಖಂಡರು ಜೀವಗಳನ್ನು ಅಪಾಯಕ್ಕೆ ತಳ್ಳುವ ಮೂಲಕ ಹಬ್ಬಗಳನ್ನು ಆಚರಿಸಬೇಕೆಂದು ಹೇಳುವುದಿಲ್ಲ. ಪ್ರಾರ್ಥನೆ ಮಾಡಲು ನೀವು ದೊಡ್ಡ ಪಂಡಾಲ್‌ ಗಳಿಗೆ ಹೋಗಬೇಕು ಎಂದು ಯಾವುದೇ  ದೇವರುಗಳು ಹೇಳುತ್ತಿಲ್ಲ ಎಂದು ಹರ್ಷವರ್ಧನ್ ಹೇಳಿದರು.

ಇನ್ನು ದೇಶದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ಈಗಾಗಲೇ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 70 ಲಕ್ಷ ಗಡಿ ದಾಟಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 74,383 ಹೊಸ ಕೊರೊನಾ ಸೋಂಕು ಪ್ರಕರಣ ದಾಖಲಾಗಿದ್ದು, ಒಟ್ಟು 70,53,806 ಕೊರೊನಾ ಪ್ರಕರಣಗಳು ದಾಖಲಾಗಿವೆ.  ಅಲ್ಲದೇ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 918 ಕೊರೊನಾ ಸಂಬಂಧಿ ಸಾವು ಸಂಭವಿಸಿದ್ದರೆ, ಇದುವರೆಗೂ ಒಟ್ಟು 1,08,334. ಸಾವು ದಾಖಲಾಗಿವೆ. ಚಳಿಗಾಲ ಆರಂಭವಾಗುತ್ತಿದ್ದು, ಚಳಿಗಾಲದಲ್ಲಿ ಕೊರೋನಾ ಆರ್ಭಟ ಮತ್ತಷ್ಟು ಜೋರಾಗುವ ಸಾಧ್ಯತೆ ಕುರಿತು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇದರ  ನಡುವೆಯೇ ದುರ್ಗಾ ಪೂಜೆ, ದಸರಾ, ದೀಪಾವಳಿ ಮತ್ತು ಛಾತ್ ಪೂಜೆ ಹಬ್ಬಗಳು ಒಂದರ ನಂತರ ಒಂದು ಸರತಿಸಾಲಲ್ಲಿ ಬರುತ್ತಿವೆ. ಹಬ್ಬದ ಹೆಸರಲ್ಲಿ ಜನ ಸಾಮಾಜಿಕ ಅಂತರ ಮತ್ತು ಕೋವಿಡ್ ಮಾರ್ಗಸೂಚಿ ಮರತೆರೆ ಅಪಾಯ ಕಟ್ಟಿಟ್ಟ ಬುತ್ತಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com