ದೇಶದ ಒಟ್ಟಾರೆ ಪ್ರಕರಣಗಳ ಪೈಕಿ 10 ರಾಜ್ಯಗಳಲ್ಲಿ ಶೇ.79ರಷ್ಟು ಕೋವಿಡ್-19 ಸಕ್ರಿಯ ಪ್ರಕರಣಗಳು!

ದೇಶದ ಒಟ್ಟಾರೆ ಕೋವಿಡ್-19 ಪ್ರಕರಣಗಳ ಪೈಕಿ ಕೇವಲ 10 ರಾಜ್ಯಗಳಲ್ಲೇ ಶೇ.79ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಆರೋಗ್ಯ ಇಲಾಖೆ ಸುದ್ದಿಗೋಷ್ಠಿ
ಆರೋಗ್ಯ ಇಲಾಖೆ ಸುದ್ದಿಗೋಷ್ಠಿ

ನವದೆಹಲಿ: ದೇಶದ ಒಟ್ಟಾರೆ ಕೋವಿಡ್-19 ಪ್ರಕರಣಗಳ ಪೈಕಿ ಕೇವಲ 10 ರಾಜ್ಯಗಳಲ್ಲೇ ಶೇ.79ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿನ ಕೊರೋನಾ ವೈರಸ್ ಸ್ಥಿತಿಗತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಇಲಾಖೆ, ದೇಶದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ನಿಧಾನವಾಗಿ ತಗ್ಗುತ್ತಿದ್ದು, ಕೋವಿಡ್ ಸೋಂಕಿಗೆ ಪ್ರಬಲವಾಗಿ ತುತ್ತಾಗಿರುವ 10 ರಾಜ್ಯಗಳನ್ನು ಹೊರತು ಪಡಿಸಿ ಇತರೆ ರಾಜ್ಯಗಳಲ್ಲಿ ಸೋಂಕಿತರ  ಪ್ರಮಾಣ ಗಣನೀಯವಾಗಿ ತಗ್ಗುತ್ತಿದೆ. ಆದರೆ ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ಕೊರೋನಾ ವೈರಸ್ ದಾಳಿಗೆ ಪ್ರಬಲವಾಗಿ ತುತ್ತಾದ 10 ರಾಜ್ಯಗಳಲ್ಲಿನ ಸಕ್ರಿಯ ಪ್ರಕರಣಗಳು ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.79ರಷ್ಟಿವೆ ಎಂದು ಹೇಳಿದೆ.

ಮಂಗಳವಾರ ದೇಶದಲ್ಲಿ 55,342 ಹೊಸ ಪ್ರಕರಣ ವರದಿಯಾಗಿದ್ದು, ಆಗಸ್ಟ್ 10ರಂದು 51,296 ಪ್ರಕರಣಗಳು ದಾಖಲಾದ ಬಳಿಕ ಇದು ದಿನವೊಂದರಲ್ಲಿ ದಾಖಲಾದ ಕನಿಷ್ಠ ಪ್ರಕರಣಗಳಾಗಿವೆ. ಜುಲೈ.27ರಂದು ದಾಖಲಾದ 628 ಸೋಂಕಿತರ ಸಾವಿನ ಸಂಖ್ಯೆಯ ಬಳಿಕ ಮಂಗಳವಾರ ಕನಿಷ್ಠ ಅಂದರೆ 706 ಸಾವು  ವರದಿಯಾಗಿದೆ. ದೇಶದ ಒಟ್ಟು 71,75,881 ಮಂದಿ ಸೋಂಕಿತರ ಪೈಕಿ 62,27,296 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 8,38,729 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೂ, ಮಹಾರಾಷ್ಟ್ರ,  ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮಾತ್ರ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ಹೇಳಲಾಗಿದೆ. 

ದೇಶದಲ್ಲಿ ಪ್ರಸ್ತುತ 8,38,729 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ದೇಶದ ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಶೇ.25.38ರಷ್ಟು ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ ಶೇ.11.26 ರಷ್ಟು ಮತ್ತು ಕರ್ನಾಟಕದಲ್ಲಿ ಶೇ.13ರಷ್ಟು ಸಕ್ರಿಯ ಪ್ರಕರಣಗಳಿವೆ. ಆಂಧ್ರಪ್ರದೇಶದಲ್ಲಿ ಶೇ.5.24,  ತಮಿಳುನಾಡಿನಲ್ಲಿ ಶೇ.5.22, ಉತ್ತರ ಪ್ರದೇಶದಲ್ಲಿ ಶೇ.4.63, ಪಶ್ಚಿಮ ಬಂಗಾಳದಲ್ಲಿ ಶೇ.3.65, ಅಸ್ಸಾಂನಲ್ಲಿ ಶೇ.3.39, ಚತ್ತೀಸ್ ಘಡದಲ್ಲಿ ಶೇ.3.27 ಮತ್ತು ತೆಲಂಗಾಣದಲ್ಲಿ ಶೇ.2.89ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಒಟ್ಟಾರೆ ಸೋಂಕಿತರ ಪೈಕಿ ಈಗಾಗಲೇ ಶೇ.87ರಷ್ಟು ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಈಗ ಕೇವಲ ಶೇ.1.69ರಷ್ಟು ಸಕ್ರಿಯ ಪ್ರಕರಣಗಳು ಮಾತ್ರ ಇವೆ. 1.53ರಷ್ಟು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com