ಜಿಎಸ್‌ಟಿ ಕೊರತೆ ನೀಗಿಸಲು 20 ರಾಜ್ಯಗಳಿಗೆ 68,825 ಕೋಟಿ ರೂ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಜಿಎಸ್‌ಟಿ ಕೊರತೆ ನೀಗಿಸಲು 20 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಾಲದ ಮೂಲಕ  68,825 ಕೋಟಿ ರೂ ಪಡೆಯಲು ಅನುಮತಿ ನೀಡಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಜಿಎಸ್‌ಟಿ ಕೊರತೆ ನೀಗಿಸಲು 20 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಾಲದ ಮೂಲಕ  68,825 ಕೋಟಿ ರೂ ಪಡೆಯಲು ಅನುಮತಿ ನೀಡಿದೆ.

ನಿನ್ನೆ ನಡೆದ ಜಿಎಸ್ ಟಿ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಜಿಎಸ್‌ಟಿ ಅನುಷ್ಠಾನ ಹಾಗೂ ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ರಾಜ್ಯಗಳಿಗೆ ಉಂಟಾಗಿರುವ ಜಿಎಸ್‌ಟಿ ನಷ್ಟಕ್ಕೆ ತಾನೇ ಸಾಲ ಪಡೆದು ಪರಿಹಾರ ವಿತರಿಸಲು ಕೇಂದ್ರ  ಸರ್ಕಾರ ನಿರಾಕರಿಸಿದೆ. ಕೇಂದ್ರ ಸರಕಾರ ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ, ರಾಜ್ಯಗಳು ಸಾಲ ಪಡೆದುಕೊಳ್ಳಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಇದರ ನಡುವೆಯೇ ಕೇಂದ್ರ ಸರ್ಕಾರ ಇಂತಹುದೊಂದು ಮಹತ್ವದ ನಿರ್ಣಯ ಕೈಗೊಂಡಿದೆ. ಜಿಎಸ್‌ಟಿ ಆದಾಯದ ಕೊರತೆಯನ್ನು ನೀಗಿಸಲು 20 ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಸಾಲಗಳ ಮೂಲಕ 68,825 ಕೋಟಿ ರೂ.ಗಳನ್ನು ಸಂಗ್ರಹಿಸಲು ಕೇಂದ್ರ ಮಂಗಳವಾರ ಅನುಮತಿ ನೀಡಿದೆ. ಪ್ರಸಕ್ತ ಹಣಕಾಸು  ವರ್ಷದಲ್ಲಿ ಒಟ್ಟು ಪರಿಹಾರದ ಕೊರತೆಯು 2.35 ಲಕ್ಷ ಕೋಟಿ ರೂ.ಗಳಾಗಿತ್ತು. ಕೇಂದ್ರವು ಆಗಸ್ಟ್‌ನಲ್ಲಿ ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ಆರ್‌ಬಿಐನಿಂದ ವಿಶೇಷ ಯೋಜನೆಯಡಿಯಲ್ಲಿ 97,000 ಕೋಟಿ ರೂ ಸಾಲಪಡೆಯುವಿಕೆ ಅಥವಾ ಮಾರುಕಟ್ಟೆಯಿಂದ 2.35 ಲಕ್ಷ ಕೋಟಿ ರೂ. ಸಾಲ  ಪಡೆಯುವಿಕೆ ಕುರಿತು ಕೇಂದ್ರ ಸರ್ಕಾರ ಸಲಹೆ ನೀಡಿತ್ತು. ಅಲ್ಲದೆ ಈ ಸಾಲ ತೀರಿಸಲು ಐಷಾರಾಮಿ, ಡಿಮೆರಿಟ್ ಮೇಲೆ ವಿಧಿಸಲಾಗುವ ಪರಿಹಾರ ಸೆಸ್ ಅನ್ನು ವಿಸ್ತರಿಸುವ ಪ್ರಸ್ತಾಪವನ್ನೂ ಅದು ಮುಂದಿಟ್ಟಿತ್ತು. ಇದೀಗ ಮುಕ್ತ ಮಾರುಕಟ್ಟೆ ಸಾಲಗಳ ಮೂಲಕ ಹೆಚ್ಚುವರಿ ಮೊತ್ತ 68,825 ಕೋಟಿ ರೂ.ಗಳನ್ನು  ಸಂಗ್ರಹಿಸಲು ಹಣಕಾಸು ಇಲಾಖೆ 20 ರಾಜ್ಯಗಳಿಗೆ ಅನುಮತಿ ನೀಡಿದೆ ಎಂದು ವಿತ್ತ ಇಲಾಖೆ ತಿಳಿಸಿದೆ.  

ಆರ್ ಬಿಐನಿಂದ ಸಾಲ ಪಡೆಯುವ ಮೊದಲ ಆಯ್ಕೆಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಒಡಿಶಾ, ಸಿಕ್ಕಿಂ, ತ್ರಿಪುರ, ಉತ್ತರ ಪ್ರದೇಶ  ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿವೆ ಎಂದು ಇಲಾಖೆ ಹೇಳಿದ್ದು, ಉಳಿದ 8 ರಾಜ್ಯಗಳು ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com