14 ತಿಂಗಳ ಬಳಿಕ ಗೃಹ ಬಂಧನದಿಂದ ಮೆಹಬೂಬಾ ಮುಫ್ತಿ ಬಿಡುಗಡೆ!

ಮಹತ್ವದ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ಶ್ರೀನಗರ: ಮಹತ್ವದ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಗೃಹ ಬಂಧನಕ್ಕೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬರೊಬ್ಬರಿ 14 ತಿಂಗಳ ಬಳಿಕ ಇಂದು ಬಿಡುಗಡೆಯಾಗಿದ್ದಾರೆ. ಈ ಮೂಲಕ ಕಣಿವೆಯ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಗೃಹ ಬಂಧನದಿಂದ ಮುಕ್ತಿ  ಪಡೆದಂತಾಗಿದೆ. ಕಣಿವೆಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನಕ್ಕೀಡು ಮಾಡಲಾಗಿತ್ತು. 

2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಆರ್ಟಿಕಲ್ 370 ಅನ್ನ ತೆಗೆಯುವ ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಮುಫ್ತಿ ಅವರನ್ನ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ವರ್ಷದ ಫೆಬ್ರವರಿ 5ರಂದು ಸಾರ್ವಜನಿಕ ಸುರಕ್ಷತೆ ಕಾಯ್ದೆ ಪಿಎಸ್​ಎ ಅಡಿಯಲ್ಲಿ ಅವರ ಬಂಧನದ ಅವಧಿಯನ್ನು  ಮುಂದುವರಿಸಲಾಯಿತು. ಏಪ್ರಿಲ್ ತಿಂಗಳವರೆಗೆ ಅವರನ್ನು ಎರಡು ಸರ್ಕಾರಿ ಕಟ್ಟಡಗಳಲ್ಲಿ ವಶದಲ್ಲಿಟ್ಟುಕೊಳ್ಳಲಾಗಿತ್ತು. ಏಪ್ರಿಲ್ 7ರಿಂದ ಮನೆಯಲ್ಲೇ ಅವರ ಗೃಹ ಬಂಧನವಾಗಿತ್ತು. ಗೃಹ ಬಂಧನದ ಅವಧಿ ಮುಗಿದ ಬಳಿಕವೂ ಕಣಿವೆ ಆಡಳಿತ ಅವರ ಗೃಹ ಬಂಧನದ ಅವಧಿಯನ್ನು ಮೂರು ತಿಂಗಳಿಗೆ  ವಿಸ್ತಿರಿಸಲಾಗಿತ್ತು. ಸರ್ಕಾರದ ಈ ನಡೆಯನ್ನು ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. 

ಅದರಂತೆ ಮೆಹಬೂಬಾ ಮುಫ್ತಿ ಅವರ ಗೃಹ ಬಂಧನದ ಕುರಿತು ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಎರಡು ವಾರಗಳ ಗಡುವು ನೀಡಿತ್ತು. ಈ ಅವಧಿ ಮುಗಿಯುವ ಮುನ್ನವೇ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಇನ್ನು ಮೆಹಬೂಬಾ ಮುಫ್ತಿ ಗೃಹ ಬಂಧನದಿಂದ  ಬಿಡುಗಡೆಯಾಗುತ್ತಿದ್ದಂತೇ, ಅವರ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಟ್ವೀಟ್ ಮಾಡಿರುವ ಇಲ್ತಿಜಾ ಮುಫ್ತಿ,. ಈ ಕಠಿಣ ಸಮಯದಲ್ಲಿ ಕುಟುಂಬದ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com