
ಚಿರಾಗ್ ಪಾಸ್ವಾನ್
ಪಾಟ್ನಾ: ನಾನು ಪ್ರಧಾನಿ ನರೇಂದ್ರ ಮೋದಿ ಅವರ ಹನುಮಂತ, ಬೇಕಿದ್ದರೆ ಎದೆ ಸೀಳಿ ನೋಡಿ ಎಂದು ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಬಿಹಾರ ಉಪ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದಿಂದ ಪ್ರತ್ಯೇಕವಾಗಿ ಸ್ಪರ್ಧಿಸುವ ಮೂಲಕ ಚಿರಾಗ್ ಪಾಸ್ವಾನ್ ಮತ ವಿಭಜನೆ ಮಾಡಲು ಯತ್ನಿಸಿದ್ದಾರೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು, ಪ್ರಧಾನಿ ಮೋದಿ ನನ್ನ ಹೃದಯದಲ್ಲಿ ವಾಸಿಸುತ್ತಿದ್ದಾರೆ. ನಾನು ಮೋದಿ ಅವರ ಹನುಮಂತ. ನನ್ನ ಎದೆ ಸೀಳಿದರೆ ಮೋದಿ ಇರುತ್ತಾರೆ. ಬೇಕಿದ್ದರೆ ನನ್ನ ಎದೆ ಸೀಳಿ ನೋಡಿ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
#WATCH I don't need to use PM Modi's photos for campaigning. He lives in my heart, I am his Hanuman. If needed, I'll tear open my chest and show it: LJP chief Chirag Paswan#BiharElections pic.twitter.com/KhVPG4w2J2
— ANI (@ANI) October 16, 2020
ಬಿಹಾರ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಎಲ್ ಜೆಪಿ ಪಕ್ಷ ಘೋಷಣೆ ಮಾಡಿತ್ತು. ಇದರ ನಡುವೆಯೇ ಕೇಂದ್ರ ಎನ್ ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ಮೃತರಾಗಿದ್ದರು. ಬಿಹಾರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಎಲ್ ಜೆಪಿ ನಿರ್ಧಾರ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ ವಿಭಜನೆಯಾಗುವ ಭೀತಿ ಆವರಿಸಿದೆ. ಇದೇ ಕಾರಣಕ್ಕೆ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು, ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ರನ್ನು "ಮತ ಕಟುವಾ" (ಮತಗಳ ವಿಭಜಕ) ಎಂದು ಟೀಕಿಸಿದ್ದರು. ಮೈತ್ರಿಕೂಟದಲ್ಲಿದ್ದೂ ಪ್ರತ್ಯೇಕವಾಗಿ ಸ್ಪರ್ಧಿಸುವ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿಸಲು ಚಿರಾಗ್ ಪಾಸ್ವಾನ್ ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಚಿರಾಗ್ ಪಾಸ್ವಾನ್ ಅವರು, ನಾನು ಪ್ರಧಾನಿ ನರೇಂದ್ರ ಮೋದಿ ಅವರ ಹನುಮಂತ. ನನ್ನ ಹೃದಯದಲ್ಲಿ ಪ್ರಧಾನಿ ಮೋದಿ ವಾಸಿಸುತ್ತಿದ್ದಾರೆ. ಬೇಕಿದ್ದರೆ ನನ್ನ ಎದೆ ಸೀಳಿ ನೋಡಿ. ಅಲ್ಲಿ ಮೋದಿ ಇರುತ್ತಾರೆ. ನನ್ನ ಗೆಲುವಿಗಾಗಿ ಮೋದಿ ಭಾವಚಿತ್ರ ಹಿಡಿದುಕೊಳ್ಳಬೇಕಾದ ಅಗತ್ಯತೆ ನನಗಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ನಾಯಕರಾದ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಬಿಹಾರ ಬಿಜೆಪಿ ಘಟಕದ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ, ಚಿರಾಗ್ ಪಾಸ್ವಾನ್ ವಿರುದ್ಧ ಕಿಡಿಕಾರಿದ್ದರು. ಚಿರಾಗ್ ತಮ್ಮ ಪ್ರಚಾರದಲ್ಲಿ ಮೋದಿ ಭಾವಚಿತ್ರ ಹಿಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ಮಾತನಾಡಿರುವ ಚಿರಾಗ್ ಪಾಸ್ವಾನ್, ಮೋದಿ ಅವರ ಭಾವಚಿತ್ರ ನನಗಿಂತ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಬೇಕಿದೆ. ಏಕೆಂದರೆ ವಿಧಿ 370ರ ರದ್ಧತಿ, ತ್ರಿವಳಿ ತಲಾಖ್, ಸಿಎಎ ಮತ್ತು ಎನ್ ಆರ್ ಸಿ ವಿಚಾರವನ್ನು ನಿರಂತರವಾಗಿ ವಿರೋಧಿಸಿದ್ದರು. ಹೀಗಾಗಿ ಮೋದಿ ಅವರ ಭಾವಚಿತ್ರ ನನಗಿಂತ ಅವರಿಗೇ ಹೆಚ್ಚು ಬೇಕು ಎಂದು ಚಿರಾಗ್ ಟಾಂಗ್ ನೀಡಿದ್ದಾರೆ.
ಅಂತೆಯೇ ಇದೇ ವೇಳೆ ನಾನು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇನೆ, ನಾನು ಈಗಲೂ ಬಿಜೆಪಿಯೊಂದಿಗೆ ಇದ್ದೇನೆ. ಭವಿಷ್ಯದಲ್ಲೂ ಇರುತ್ತೇನೆ. ನವೆಂಬರ್ 10ರ ನಂತರ ಅಂದರೆ ಚುನಾವಣಾ ಫಲಿತಾಂಶದ ಬಳಿಕ ಬಿಹಾರದಲ್ಲಿ ಎಲ್ ಜೆಪಿ-ಬಿಜೆಪಿ ಸರ್ಕಾರ ರಚನೆ ಮಾಡಲಾಗುತ್ತದೆ. ನಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಭಾವಚಿತ್ರದ ಮುಂದೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.