ನಿತೀಶ್ ಸರ್ಕಾರ ಕೋವಿಡ್-19 ಅನ್ನು ಸಮರ್ಥವಾಗಿ ಎದುರಿಸಿದೆ, ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ: ಪ್ರಧಾನಿ ಮೋದಿ

ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತವಾಗಿರದಿದ್ದಿದ್ದರೆ ರಾಜ್ಯದಲ್ಲಿ ಕೊರೋನಾದಿಂದ ಇನ್ನಷ್ಟು ನಾಗರಿಕರು ಮೃತಪಡುತ್ತಿದ್ದರು, ಊಹಿಸಲು ಸಾಧ್ಯವಿಲ್ಲದಷ್ಟು ತೊಂದರೆ, ಪ್ರಾಣಹಾನಿ, ಆರೋಗ್ಯ ಸಮಸ್ಯೆಯುಂಟಾಗುತ್ತಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರದ ಸಸರಮ್ ನಲ್ಲಿ ಇಂದು ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಬಿಹಾರದ ಸಸರಮ್ ನಲ್ಲಿ ಇಂದು ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ

ಸಸರಮ್(ಬಿಹಾರ): ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತವಾಗಿರದಿದ್ದಿದ್ದರೆ ರಾಜ್ಯದಲ್ಲಿ ಕೊರೋನಾದಿಂದ ಇನ್ನಷ್ಟು ನಾಗರಿಕರು ಮೃತಪಡುತ್ತಿದ್ದರು, ಊಹಿಸಲು ಸಾಧ್ಯವಿಲ್ಲದಷ್ಟು ತೊಂದರೆ, ಪ್ರಾಣಹಾನಿ, ಆರೋಗ್ಯ ಸಮಸ್ಯೆಯುಂಟಾಗುತ್ತಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಬಿಹಾರ ವಿಧಾನಸಭೆ ಚುನಾವಣೆಗೆ ಸಸರಮ್ ಕ್ಷೇತ್ರದಿಂದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದು, ಬಿಹಾರ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳದಿರುತ್ತಿದ್ದರೆ ಸಾಂಕ್ರಾಮಿಕ ರೋಗ ಮತ್ತಷ್ಟು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿತ್ತು, ಆದರೆ ಇಂದು ಬಿಹಾರ ಕೊರೋನಾ ವಿರುದ್ಧ ಹೋರಾಟದಲ್ಲಿ ಗೆದ್ದು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುವಂತಾಗಿದೆ ಎಂದರು.

ಇಂದು ಬೆಳಗ್ಗೆ ಅವರು ರಾಜ್ಯಕ್ಕೆ ಆಗಮಿಸಿ ಇತ್ತೀಚೆಗೆ ಅಗಲಿದ ರಾಮ್ ವಿಲಾಸ್ ಪಾಸ್ವಾನ್ ಮತ್ತು ರಘುವಂಶ ಪ್ರಸಾದ್ ದಾಸ್ ಅವರಿಗೆ ಗೌರವ ನಮನ ಸಲ್ಲಿಸಿ ರ್ಯಾಲಿ ನಡೆದ ಸ್ಥಳ ಸಸರಮ್ ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ತೆರಳಿದರು.

ಭಾಷಣದ ವೇಳೆ ಆರ್ ಜೆಡಿ ವಿರುದ್ಧ ವಾಗ್ದಾಳಿ ನಡೆಸಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಮೊದಲು ಬಿಹಾರ ಮಂದಿ ಅಪರಾಧ ಮತ್ತು ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದರು. ಬಡವರಿಗೆ ಮೀಸಲಿಟ್ಟಿದ್ದ ಹಣ ಭ್ರಷ್ಟಾಚಾರಿಗಳ ಕೈಸೇರುತ್ತಿತ್ತು. ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಬಂದ ಮೇಲೆ ಅದನ್ನು ಪತ್ತೆಹಚ್ಚಿ ಭ್ರಷ್ಟಾಚಾರವನ್ನು ತಗ್ಗಿಸಿತು. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ ಆಹಾರ ವಿತರಿಸಿದೆ ಎಂದು ಹೇಳಿದರು.

ದೇಶದ ಭದ್ರತೆ ಮತ್ತು ಸುರಕ್ಷತೆ ವಿಚಾರದಲ್ಲಿ ಬಿಹಾರಿಗಳು ಎಲ್ಲರಿಗಿಂತ ತುಸು ಮುಂದೆ.ಚೀನಾ ಜೊತೆ ಗಲ್ವಾನ್ ಕಣಿವೆ ಸಂಘರ್ಷ ಮತ್ತು ಕಳೆದ ವರ್ಷದ ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸಿದ ಮೋದಿ, ಗಲ್ವಾನ್ ಕಣಿವೆಯಲ್ಲಿ ಬಿಹಾರದ ಯೋಧರು ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಕೂಡ ಬಿಹಾರದ ಪುತ್ರರು ಕೆಚ್ಚೆದೆಯಿಂದ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ವಿಚಾರ: ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ವಿಧಿ 370ರಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಟೀಕಿಸುತ್ತಿದ್ದು, ಮತ್ತೆ ಸ್ಥಾನಮಾನ ವಾಪಸ್ ತರಬೇಕೆಂಬ ಪ್ರಯತ್ನ ನಡೆಸುತ್ತಿದ್ದಾರೆ. ದೇಶದ ಪ್ರತಿಯೊಬ್ಬರೂ ಸಂವಿಧಾನ ವಿಧಿ 370ನ್ನು ರದ್ದುಪಡಿಸಬೇಕೆಂದು ಬಯಸುತ್ತಿದ್ದರೆ ವಿರೋಧ ಪಕ್ಷದವರು ಮಾತ್ರ ತಾವು ಅಧಿಕಾರಕ್ಕೆ ಬಂದರೆ ಮತ್ತೆ ಸ್ಥಾನಮಾನ ನೀಡುತ್ತೇವೆ ಎನ್ನುತ್ತಿದ್ದಾರೆ.

ಇಂತಹ ಹೇಳಿಕೆ ಕೊಟ್ಟ ಮೇಲೂ ಬಿಹಾರದಲ್ಲಿ ಮತ ಕೇಳಲು ಅವರಿಗೆಷ್ಟು ಧೈರ್ಯ ಬೇಕು, ಇದು ಬಿಹಾರಕ್ಕೆ ಅವಮಾನವಲ್ಲವೇ, ಈ ರಾಜ್ಯ ನಮ್ಮ ದೇಶದ ಗಡಿಯನ್ನು ಕಾಪಾಡಲು ಅನೇಕ ಪುತ್ರ-ಪುತ್ರಿಯರನ್ನು ಸೇನೆಗೆ ಕಳುಹಿಸಿದೆ ಎಂದರು.

ಬಿಹಾರ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಎಲ್ಲಾ ಪೂರ್ವ ಸಮೀಕ್ಷೆಗಳು ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದೇ ಸಮೀಕ್ಷೆಗಳು ಹೇಳುತ್ತಿವೆ, ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಕೇಂದ್ರ ಸರ್ಕಾರ ನೀಡಿದ ನೆರವಿಗೆ ಧನ್ಯವಾದ ಹೇಳಿದರು. ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಗುಣಮುಖ ಪ್ರಮಾಣ ಶೇಕಡಾ 94ರಷ್ಟಿದ್ದು, ನಿರ್ಗತಿಕ ವರ್ಗಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನುಕೂಲ, ರಾಜ್ಯದ ರೈತರು ಮತ್ತು ದೇಶಕ್ಕೆ ಒಟ್ಟಾರೆಯಾಗಿ ಸಹಾಯವಾಗುತ್ತಿದೆ ಎಂದರು.

ಬಿಹಾರ ವಿಧಾನಸಭೆಗೆ ಮೂರು ಹಂತಗಳಲ್ಲಿ ಇದೇ 28ರಿಂದ ನವೆಂಬರ್ 3 ಮತ್ತು 7ರವರೆಗೆ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com