ದೆಹಲಿ-ಗೋವಾ ವಿಮಾನದಲ್ಲಿ ಉಗ್ರ ಇದ್ದಾನೆ ಎಂದು ಕೂಗಿದ ಪ್ರಯಾಣಿಕ, ಆತಂಕ ಸೃಷ್ಟಿ
ವಿಮಾನ ಆಗಸದಲ್ಲಿ ಹಾರಾಡುತ್ತಿರುವಾಗಲೇ ವಿಮಾನದಲ್ಲಿ ಭಯೋತ್ಪಾದಕನಿದ್ದಾನೆ ಎಂದು ಪ್ರಯಾಣಿಕನೊಬ್ಬ ಕೂಗುವ ಮೂಲಕ ಸಹ ಪ್ರಯಾಣಿಕರನ್ನು ಕೆಲಕಾಲ ಆತಂಕಕ್ಕೆ ದೂಡಿದ್ದ ವಿಚಾರ ಬೆಳಕಿಗೆ ಬಂದಿದೆ.
Published: 23rd October 2020 01:06 PM | Last Updated: 23rd October 2020 01:20 PM | A+A A-

ಸಾಂದರ್ಭಕ ಚಿತ್ರ
ಪಣಜಿ: ವಿಮಾನ ಆಗಸದಲ್ಲಿ ಹಾರಾಡುತ್ತಿರುವಾಗಲೇ ವಿಮಾನದಲ್ಲಿ ಭಯೋತ್ಪಾದಕನಿದ್ದಾನೆ ಎಂದು ಪ್ರಯಾಣಿಕನೊಬ್ಬ ಕೂಗುವ ಮೂಲಕ ಸಹ ಪ್ರಯಾಣಿಕರನ್ನು ಕೆಲಕಾಲ ಆತಂಕಕ್ಕೆ ದೂಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಏರ್ ಇಂಡಿಯಾದ ದೆಹಲಿ-ಗೋವಾ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದಾಗಿ ಕೆಲವು ಸಮಯ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ದೆಹಲಿಯ ಓಖ್ಲಾದ ನಿವಾಸಿ ಜಿಯಾ ಉಲ್ ಹಕ್ ಎಂಬಾತ ತಾನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕದ ಅಧಿಕಾರಿಯಾಗಿದ್ದು, ವಿಮಾನದಲ್ಲಿ ಭಯೋತ್ಪಾದಕನೊಬ್ಬನಿದ್ದಾನೆ ಎಂದು ಹೇಳಿದ್ದರು.
ವಿಮಾನ ಹಾರಾಡುತ್ತಿರುವ ನಡುವೆಯೇ ಗೋವಾ ವೈಮಾನಿಕ ಸಂಚಾರ ನಿಯಂತ್ರಣ ಘಟಕಕ್ಕೆ ಪೈಲಟ್ ಮಾಹಿತಿ ನೀಡಿದ್ದರು. ಮಧ್ಯಾಹ್ನ 3.30ರ ಸುಮಾರಿಗೆ ಗೋವಾದಲ್ಲಿ ವಿಮಾನ ಇಳಿಸುತ್ತಿದ್ದಂತೆಯೇ ಆತನನ್ನು ಬಂಧಿಸಲಾಗಿದೆ. ಗೋವಾ ಪೊಲೀಸ್ ಮತ್ತು ಕೇಂದ್ರ ಬೇಹುಗಾರಿಕಾ ಸಂಸ್ಥೆಗಳ ಜಂಟಿ ತಂಡ ಆತನನ್ನು ವಿಚಾರಣೆಗೆ ಒಳಪಡಿಸಿದೆ. ಘಟನೆ ಬಗ್ಗೆ ಆ ಪ್ರಯಾಣಿಕನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಆತನ ಆರೋಗ್ಯ ಚೆನ್ನಾಗಿಲ್ಲ. ಖಿನ್ನತೆ ಹಾಗ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.