ತ್ರಿವರ್ಣ ಧ್ವಜ ವಿವಾದ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿರನ್ನು ಬಂಧಿಸಿ, 'ದೇಶದ್ರೋಹ' ಪ್ರಕರಣ ದಾಖಲಿಸಲು ಬಿಜೆಪಿ ಆಗ್ರಹ!

ಭಾರತದ ಐಕ್ಯತೆ ಮತ್ತು ಸಾರ್ವಭೌಮತೆಯನ್ನು ಸಾರುವ ತ್ರಿವರ್ಣ ಧ್ವಜ ಕುರಿತಂತೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕೂಡಲೇ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಬಿಜೆಪಿ ಆಗ್ರಹಿಸಿದೆ.
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ನವದೆಹಲಿ: ಭಾರತದ ಐಕ್ಯತೆ ಮತ್ತು ಸಾರ್ವಭೌಮತೆಯನ್ನು ಸಾರುವ ತ್ರಿವರ್ಣ ಧ್ವಜ ಕುರಿತಂತೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕೂಡಲೇ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಬಿಜೆಪಿ ಆಗ್ರಹಿಸಿದೆ.

ವಿಧಿ 370ರ ರದ್ಧತಿ ವೇಳೆ ಗೃಹ ಬಂಧನಕ್ಕೀಡಾಗಿ, 14 ತಿಂಗಳ ಗೃಹ ಬಂಧನದಿಂದ ಬಿಡುಗಡೆಗೊಂಡ ನಂತರ ಇತ್ತೀಚೆಗೆ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ್ದ ಮೆಹಬೂಬಾ ಮುಫ್ತಿ, ರಾಜ್ಯದ ಧ್ವಜವನ್ನು ಮರಳಿ ಸ್ಥಾಪಿಸಿದ ಬಳಿಕವೇ ರಾಷ್ಟ್ರ ಧ್ವಜವನ್ನು ಹಿಡಿಯಲಿದ್ದೇನೆ ಎಂದು ಹೇಳಿದ್ದರು. ಇದಕ್ಕೆ  ಪ್ರತಿಕ್ರಿಯಿಸಿರುವ ಬಿಜೆಪಿ, ರಾಜ್ಯದ ಧ್ವಜವನ್ನು ಅಥವಾ 370ನೇ ವಿಧಿಯನ್ನು ಮರಳಿ ಸ್ಥಾಪಿಸುವುದು ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದು ಹೇಳಿದೆ. 

ಈ ಬಗ್ಗೆ ಮಾತನಾಡಿರುವ ಬಿಜೆಪಿಯ ಜಮ್ಮು-ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಅವರು, 'ಮೆಹಬೂಬಾ ಮುಫ್ತಿ ಅವರು ದೇಶದ್ರೋಹಿ ಹೇಳಿಕೆಗಳನ್ನು ನೀಡಿರುವುದರ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಮುಫ್ತಿ ವಿರುದ್ಧ  ದೇಶದ್ರೋಗ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಆಕೆಯನ್ನು ಜೈಲಿಗಟ್ಟಬೇಕು ಎಂದು ಹೇಳಿದ್ದಾರೆ.

ಅಂತೆಯೇ ಕಾಶ್ಮೀರದ ಜನರನ್ನು ಪ್ರಚೋದಿಸಬೇಡಿ ಎಂದು ಮೆಹಬೂಬಾ ಮುಫ್ತಿಯಂತಹ ನಾಯಕರಿಗೆ ನಾನು ಎಚ್ಚರಿಕೆ ನೀಡುತ್ತೇನೆ. ಶಾಂತಿ, ಸಹಜತೆ ಮತ್ತು ಸಹೋದರತ್ವವನ್ನು ಭಂಗಗೊಳಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಏನಾದರೂ ತಪ್ಪು ಸಂಭವಿಸಿದಲ್ಲಿ, ಮೆಹಬೂಬಾ ಅವರೇ ಅದರ  ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಪ್ರತಿ ಹನಿ ರಕ್ತವನ್ನೂ ರಾಷ್ಟ್ರಧ್ವಜ, ದೇಶ ಮತ್ತು ತಾಯ್ನಾಡಿಗಾಗಿ ತ್ಯಾಗ ಮಾಡಲಿದ್ದೇವೆ. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಹೀಗಾಗಿ ದೇಶದಲ್ಲಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಒಂದೇ ಧ್ವಜಾರೋಹಣ ಮಾಡಬೇಕು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com