ಹಬ್ಬವೆಂದು ಮೈ ಮರೆಯಬೇಡಿ, ತಾಳ್ಮೆಯಿಂದ ಸರಳವಾಗಿ ಆಚರಿಸಿ: ಕೊರೋನಾ ಸಮಯದಲ್ಲಿ ಪ್ರಧಾನಿ ಮೋದಿ ಕರೆ

ಬಿಕ್ಕಟ್ಟು, ಕಷ್ಟದ ಸಮಯದಲ್ಲಿ ತಾಳ್ಮೆಯ ಗೆಲುವೇ ದಸರಾ ಹಬ್ಬವಾಗಿದೆ. ಇಂದು ಕೊರೋನಾ ಮಧ್ಯೆ ಬಹಳ ಸಂಯಮ, ವಿನಯದಿಂದ ಸರಳವಾಗಿ ದಸರಾ ಹಬ್ಬವನ್ನು ಆಚರಿಸುತ್ತಿದ್ದೀರಿ, ಈ ಕೊರೋನಾ ಯುದ್ಧದಲ್ಲಿ ನಾವು ಗೆಲ್ಲುವುದು ನಿಶ್ಚಿತ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಬಿಕ್ಕಟ್ಟು, ಕಷ್ಟದ ಸಮಯದಲ್ಲಿ ತಾಳ್ಮೆಯ ಗೆಲುವೇ ದಸರಾ ಹಬ್ಬವಾಗಿದೆ. ಇಂದು ಕೊರೋನಾ ಮಧ್ಯೆ ಬಹಳ ಸಂಯಮ, ವಿನಯದಿಂದ ಸರಳವಾಗಿ ದಸರಾ ಹಬ್ಬವನ್ನು ಆಚರಿಸುತ್ತಿದ್ದೀರಿ, ಈ ಕೊರೋನಾ ಯುದ್ಧದಲ್ಲಿ ನಾವು ಗೆಲ್ಲುವುದು ನಿಶ್ಚಿತ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಆಕಾಶವಾಣಿಯ ತಿಂಗಳ ಕೊನೆಯ ಭಾನುವಾರದ ಮನ್ ಕಿ ಬಾತ್ ಕಾರ್ಯಕ್ರಮದ 70ನೇ ಆವೃತ್ತಿಯಲ್ಲಿ ಅವರು ಮಾತನಾಡಿ, ಈ ವರ್ಷ ಹಬ್ಬದ ಉತ್ಸಾಹದ ನಡುವೆ ಶಾಪಿಂಗ್ ಮಾಡಲು ನಗರಗಳಲ್ಲಿ ಮಳಿಗೆಗಳಿಗೆ ಹೋದಾಗ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ. ಮಾರುಕಟ್ಟೆಯಿಂದ ವಸ್ತುಗಳನ್ನು ಖರೀದಿಸುವಾಗ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ ಎಂದು ಜನತೆಗೆ ಕರೆ ನೀಡಿದರು.

ಹಿಂದಿನ ವರ್ಷಗಳಲ್ಲೆಲ್ಲಾ ದುರ್ಗಾ ಪೂಜೆಯ ದಿನ ಪಂಡಾಲ್ ಗಳಲ್ಲಿ ಸಾವಿರಾರು ಜನ ಒಟ್ಟು ಸೇರುತ್ತಿದ್ದರು. ದುರ್ಗಾ ಪೂಜೆ, ದಸರಾ ಎಂದರೆ ಜನರಿಗೆ, ಮಹಿಳೆಯರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮಗಳಿಂದ ಜತೆ ಸೇರುತ್ತಿದ್ದರು. ಆದರೆ ಈ ವರ್ಷ ಒಟ್ಟು ಸೇರಿ ದುರ್ಗಾ ಪೂಜೆ ಮಾಡುವುದಕ್ಕೆ ಅವಕಾಶವಿಲ್ಲ. ಮುಂದೆ ಸಾಕಷ್ಟು ಹಬ್ಬಗಳು ಬರುತ್ತವೆ. ಈ ಬಾರಿ ಕಟ್ಟುನಿಟ್ಟಿನಿಂದ ಜಾಗ್ರತೆಯಿಂದ ಈ ಕೊರೋನಾ ಸಮಸ್ಯೆ ವಿರುದ್ಧ ಹೋರಾಡಬೇಕಿದೆ, ಅದರಲ್ಲಿ ಗೆದ್ದು ಮುಂದೆ ಹಬ್ಬ ಆಚರಿಸೋಣ ಎಂದರು.

ದಸರಾ ಮುಗಿದ ನಂತರ ಈದ್ ಮಿಲಾದ್, ಶಾರದ ಪೂರ್ಣಿಮಾ, ವಾಲ್ಮೀಕಿ ಜಯಂತಿ, ದಂತೆರಸ್, ಛತ್ ಪೂಜೆ, ಗುರು ನಾನಕ ಜಯಂತಿ ದೀಪಾವಳಿ ಹೀಗೆ ಸಾಕಷ್ಟು ಹಬ್ಬಗಳು ಸಾಲು ಸಾಲು ಬರುತ್ತವೆ. ಮನೆಯಲ್ಲಿಯೇ ಕುಳಿತು ದೀಪ ಹಚ್ಚೋಣ, ಸರಳವಾಗಿ, ಸುಂದರವಾಗಿ ಆಚರಿಸೋಣ ಎಂದರು.

ಹಬ್ಬ ಆಚರಣೆ ಸಮಯದಲ್ಲಿ ಹೊರಗೆ ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಸ್ಯಾನಿಟೈಸ್ ಮಾಡಿಕೊಳ್ಳಲು ಮರೆಯದಿರಿ, ಕೊರೋನಾ ಲಾಕ್ ಡೌನ್ ಸಮಯದಲ್ಲಿ ಆರೋಗ್ಯ ಸೇವೆ ಕಾರ್ಯಕರ್ತರು, ವೈದ್ಯರು, ದಾದಿಯರು, ಮನೆಗೆಲಸದವರು, ಪೊಲೀಸರು, ಪೌರ ಕಾರ್ಮಿಕರು, ರಕ್ಷಣಾ ಪಡೆ ಸಿಬ್ಬಂದಿ, ಶುಚಿತ್ವ ಕೆಲಸದವರು ನಮಗಾಗಿ, ನಮ್ಮ ಕ್ಷೇಮಕ್ಕಾಗಿ ಕೆಲಸ ಮಾಡಿದ್ದರು, ಇಂದು ದಸರಾ ಹಬ್ಬದ ಸಮಯದಲ್ಲಿ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗೋಣ, ಅವರೆಲ್ಲರನ್ನೂ ನೆನೆಯೋಣ ಎಂದರು.

ಈ ಸಂದರ್ಭದಲ್ಲಿ ನಮ್ಮ ದೇಶದ ಗಡಿಯನ್ನು ಕಾಯುವ ಯೋಧರನ್ನು ನೆನೆಯೋಣ, ಅವರನ್ನು ನೆನೆಯುತ್ತಾ ಹಬ್ಬ ಆಚರಿಸೋಣ, ಭಾರತ ಮಾತೆಯ ಈ ಸುಪುತ್ರರಿಗಾಗಿ ನಾವು ದೀಪ ಹಚ್ಚಬೇಕು, ಇಡೀ ದೇಶ ಸೈನಿಕರೊಂದಿಗೆ ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ ಎಂದರು.

ಅಕ್ಟೋಬರ್ 31, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿ, ಅವರಿಗೆ ನನ್ನ ಗೌರವ ನಮನಗಳು ಎಂದು ಮನ್ ಕಿ ಬಾತ್ ನಲ್ಲಿ ಪ್ರಧಾನಿ ನೆನೆದರು.

ಸ್ಥಳೀಯತೆಗೆ ಒತ್ತು: ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ನಾವು ಸ್ಥಳೀಯತೆಗೆ ಆದ್ಯತೆ ಕೊಡಬೇಕು. ಈ ಬಾರಿಯ ಗಾಂಧಿ ಜಯಂತಿ ಸಂದರ್ಭದಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್ ನ ಖಾದಿ ಮಳಿಗೆಯಿಂದ ಜನರು 1 ಕೋಟಿಗೂ ಅಧಿಕ ಬೆಲೆ ಬಾಳುವ ವಸ್ತ್ರಗಳನ್ನು ಖರೀದಿಸಿದರು. ಕೊರೋನಾ ವೈರಸ್ ಸಮಯದಲ್ಲಿ ಖಾದಿ ಮಾಸ್ಕ್ ಗಳು ಕೂಡ ಜನಪ್ರಿಯವಾಗುತ್ತಿವೆ. ಖಾದಿ ಜನಪ್ರಿಯವಾಗುತ್ತಿರುವುದು ಮಾತ್ರವಲ್ಲದೆ ಹಲವು ಕಡೆಗಳಲ್ಲಿ ಸಿಗುವಂತೆ ಮಾಡಲಾಗುತ್ತಿದೆ. ಇಲ್ಲಿಯ ಖಾದಿ ಮೆಕ್ಸಿಕೊದ ಒಯಕ್ಸಾಕದಲ್ಲಿ ಸಿಗುತ್ತಿದೆ. ಇಲ್ಲಿನ ಅನೇಕ ಮಂದಿ ಖಾದಿ ನೇಯುತ್ತಾರೆ ಎಂದರು.

ಜನರು ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ ಆತ್ಮನಿರ್ಭರಕ್ಕೆ ಒತ್ತು ನೀಡಿ ಎಂದು ಹೇಳುವಾಗ ಪ್ರಧಾನಿ, ಜಮ್ಮು-ಕಾಶ್ಮೀರದ ಪುಲ್ವಾಮಾದ ಪೆನ್ಸಿಲ್ ಗ್ರಾಮದ ಬಗ್ಗೆ ಮಾತನಾಡಿದರು. ಇಲ್ಲಿ ಮಕ್ಕಳು ಬಳಸುವ ಪೆನ್ಸಿಲ್ ಸ್ಲೇಟ್ ಬಳಸುವ ಹಲವಾರು ಘಟಕಗಳಿದ್ದು ಉದ್ಯೋಗವಕಾಶ ಒದಗಿಸುತ್ತಿದೆ ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ತೂತುಕುಡಿಯ ಪೊನ್ ಮರಿಯಪ್ಪನ್ ಎಂಬ ವ್ಯಕ್ತಿಯನ್ನು ಪರಿಚಯ ಮಾಡಿಕೊಟ್ಟು, ಇವರು ವೃತ್ತಿಯಲ್ಲಿ ಕ್ಷೌರಿಕ, ತಮ್ಮ ಸಲೂನ್ ನ ಒಂದು ಭಾಗವನ್ನು ಸೆಲೂನ್ ಮಾಡಿಕೊಂಡಿದ್ದು, ಕ್ಷೌರಕ್ಕಾಗಿ ಕಾಯುತ್ತಿರುವವರು ಗ್ರಂಥಾಲಯದಲ್ಲಿ ಕುಳಿತು ಓದುವಂತೆ ಪ್ರೇರಣೆ ಮಾಡುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com