ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಸೈನಿಕರ ದಾಳಿ, ಓರ್ವನಿಗೆ ಗಾಯ

ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆಯ ಸೈನಿಕರು ದಾಳಿ ಮಾಡಿರುವ ಘಟನೆ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಮೇಶ್ವರಂ: ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆಯ ಸೈನಿಕರು ದಾಳಿ ಮಾಡಿರುವ ಘಟನೆ ವರದಿಯಾಗಿದೆ.

ಮೀನುಗಾರಿಕೆಗೆ ತೆರಳಿದ್ದ ತಮಿಳುನಾಡು ಮೂಲದ ಮೀನುಗಾರರ ಮೇಲೆ ಲಂಕಾ ನೌಕಾಪಡೆ ಯೋಧರು ದಾಳಿ ಮಾಡಿದ್ದು, ಮೀನುಗಾರರು ಭಾರತೀಯ ಜಲಗಡಿ ದಾಟಿ ಶ್ರೀಲಂಕಾ ಜಲಗಡಿಯೊಳಗೆ ಬಂದಿದ್ದಾರೆ ಎಂದು ಆರೋಪಿಸಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಓರ್ವ ಮೀನುಗಾರ  ಗಾಯಗೊಂಡಿದ್ದು, ಗಾಯಾಳು ಮೀನುಗಾರನನ್ನು ತಮಿಳುನಾಡಿನ ರಾಮೇಶ್ವರಂ ಮೂಲದವರು ಎಂದು ತಿಳಿದುಬಂದಿದೆ.

ದಾಳಿ ಕುರಿತು ಹೆಸರು ಹೇಳಲಿಚ್ಛಿಸದ ಮೀನುಗಾರರೊಬ್ಬರು ಮಾಹಿತಿ ನೀಡಿದ್ದು, ಭಾರತೀಯ ಜಲಗಡಿಯಲ್ಲೇ ತಾವು ಮೀನುಗಾರಿಕೆ ನಡೆಸುತ್ತಿದ್ದೆವು. ಈ ವೇಳೆ ಭಾರತೀಯ ಗಡಿಯೊಳಗೆ ಪ್ರವೇಶಿಸಿದ ಲಂಕಾ ಸೇನೆಯ ಸೈನಿಕರು ನೋಡನೋಡುತ್ತಿದ್ದಂತೆಯೇ ದಾಳಿ ಮಾಡಿದರು. ನಮ್ಮ ಬೋಟ್ ನತ್ತ ಕಲ್ಲು  ತೂರಿದರು. ನಮ್ಮ ಮೀನುಗಾರಿಕಾ ನೆಟ್ ಗೆ ಬೆಂಕಿ ಹಾಕಿದರು. ನಾವು ನಮ್ಮ ಗಡಿಯೊಳಗೇ ಮೀನುಗಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರೂ ಕೇಳಲಿಲ್ಲ ಎಂದು ಆರೋಪಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು ದಾಳಿ ಕುರಿತು ಯಾವುದೇ ಮೀನುಗಾರ ದೂರು ನೀಡಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಜಯಲಲಿತಾ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಶ್ರೀಲಂಕಾ ಸರ್ಕಾರದೊಂದಿಗೆ ಸೌಹಾರ್ಧ ಒಪ್ಪಂದ ಮಾಡಿಕೊಂಡಿದ್ದರು. ಭಾರತೀಯ ಜಲಗಡಿ ಮಾತ್ರವಲ್ಲದೇ ಲಂಕಾ ಜಲಗಡಿಯಲ್ಲೂ ತಮಿಳುನಾಡು ಮೀನುಗಾರರು ಮೀನುಗಾರಿಕೆ ನಡೆಸಲು ಒಪ್ಪಂದ ಮಾಡಿಕೊಂಡಿದ್ದರು. ಈ ಸೌಹಾರ್ಧ ಒಪ್ಪಂದಕ್ಕೆ  ಪ್ರತಿಯಾಗಿ ಭಾರತ ಸರ್ಕಾರ ಲಂಕಾಗೆ ಗಡಿಯಲ್ಲಿ ಒಂದು ದ್ವೀಪವನ್ನೂ ಕೂಡ ಬಿಟ್ಟುಕೊಟ್ಟಿತ್ತು. ಆದರೆ ನಿಯಮವನ್ನು ಮುರಿದಿರುವ ಲಂಕಾ ಸೇನೆ ಪದೇ ಪದೇ ಭಾರತೀಯ ಮೀನುಗಾರರ ಮೇಲೆ ದಾಳಿ ಮಾಡುತ್ತಿದೆ. ಪ್ರಮುಖವಾಗಿ ಚೀನಾ ಲಂಕಾದಲ್ಲಿ ಹೂಡಿಕೆ ಮಾಡಲು ಆರಂಭಿಸಿದ ಬಳಿಕ ಇಂತಹ ದಾಳಿಗಳು  ಹೆಚ್ಚಾಗಿವೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com