ಎಸ್ ಐಟಿ ಮುಂದೆ ಸತತ 9 ಗಂಟೆ ವಿಚಾರಣೆ ಎದುರಿಸಿದ್ದ ಮೋದಿ ಒಂದು ಕಪ್ ಟೀ ಸಹ ಕುಡಿದಿರಲಿಲ್ಲವಂತೆ!

ವಿಶೇಷ ತನಿಖಾ ತಂಡ(ಎಸ್ಐಟಿ) 2002ರ ಗುಜರಾತ್ ಗಲಭೆ ಕುರಿತು ಕೇಳಿದ್ದ 100 ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಯನ್ನೂ ಬಿಡದೆ ಸತತ 9 ಗಂಟೆಗಳ ಸುದೀರ್ಘ ಕಾಲ ಅಂದಿನ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿ ವಿಚಾರಣೆ ಎದುರಿಸಿ  ಉತ್ತರಿಸಿದ್ದರು.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ವಿಶೇಷ ತನಿಖಾ ತಂಡ(ಎಸ್ಐಟಿ) 2002ರ ಗುಜರಾತ್ ಗಲಭೆ ಕುರಿತು ಕೇಳಿದ್ದ 100 ಪ್ರಶ್ನೆಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಸತತ 9 ಗಂಟೆಗಳ ಸುದೀರ್ಘ ಕಾಲ ಅಂದಿನ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿ ತಾಳ್ಮೆಯಿಂದ ವಿಚಾರಣೆ ಎದುರಿಸಿ  ಉತ್ತರಿಸಿದ್ದರು. ಈ ಅವಧಿಯಲ್ಲಿ ಒಂದು ಗ್ಲಾಸು ಟೀ ಸಹ ಅವರು ಕುಡಿದಿರಲಿಲ್ಲ ಎಂದು ಅಂದಿನ ತನಿಖೆಯ ತಂಡದಲ್ಲಿ ಒಬ್ಬರಾಗಿದ್ದ ಆರ್ ಕೆ ರಾಘವನ್ ಹೇಳಿದ್ದಾರೆ.

ಅವರು ತಮ್ಮ ಹೊಸ ಪುಸ್ತಕ 'ಎ ರೋಡ್ ವೆಲ್ ಟ್ರಾವಲ್ಡ್' ದಲ್ಲಿ 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರು ವಿಚಾರಣೆ ಎದುರಿಸಿದ ರೀತಿಯನ್ನು ಬರೆದುಕೊಂಡಿದ್ದಾರೆ. ಎಸ್ ಐಟಿಯವರು ವಿಚಾರಣೆಗೆ ಕರೆದಾಗ ಮೋದಿಯವರು ಗಾಂಧಿನಗರದಲ್ಲಿರುವ ಕಚೇರಿಗೆ ಖುದ್ದಾಗಿ ಬಂದಿದ್ದರು. ಬರುವಾಗ ಅವರೇ  ಬಾಟಲ್ ನಲ್ಲಿ ನೀರು ತಂದಿದ್ದರು ಎಂದರು.

2002ರ ಗುಜರಾತ್ ಹತ್ಯಾಕಾಂಡದ ತನಿಖಾ ತಂಡಕ್ಕೆ ನೇಮಕಗೊಳ್ಳುವ ಮೊದಲು ರಾಘವನ್ ಸಿಬಿಐಯ ನೇತೃತ್ವವನ್ನು ಕೂಡ ವಹಿಸಿದ್ದರು. ಬೋಫೋರ್ಸ್ ಹಗರಣ ,2000ನೇ ಇಸವಿಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯದ ಮ್ಯಾಚ್ ಫಿಕ್ಸಿಂಗ್, ಮೇವು ಹಗರಣ ಸೇರಿದಂತೆ ಅನೇಕ ವರ್ಷಗಳವರೆಗೆ ಹಲವು ಉನ್ನತ ಮಟ್ಟದ ತನಿಖಾ ತಂಡಗಳಲ್ಲಿ ಇದ್ದರು.

ಬೇರೆ ಕಡೆ ವಿಚಾರಣೆ ನಡೆಸಿದರೆ ತಪ್ಪು ಸಂದೇಶ ಜನರಿಗೆ ರವಾನೆಯಾಗುತ್ತದೆ ಎಂದು ಖುದ್ದಾಗಿ ಅವರೇ ಎಸ್ ಐಟಿ ಕಚೇರಿಗೆ ಬರಬೇಕೆಂದು ನಾವು ಅವರ ಸಿಬ್ಬಂದಿಗೆ ಆಗ ಹೇಳಿ ಕಳುಹಿಸಿದ್ದೆವು. ಅವರು ನಮ್ಮ ನಿಲುವನ್ನು ಅರ್ಥ ಮಾಡಿಕೊಂಡು ಉತ್ಸಾಹದಿಂದ ಗಾಂಧಿನಗರದಲ್ಲಿರುವ ಎಸ್ಐಟಿ ಸರ್ಕಾರಿ ಕಚೇರಿಗೆ ವಿಚಾರಣೆ ಎದುರಿಸಲು ಬಂದರು. ನಾನು ಮತ್ತು ಮೋದಿಯವರು ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ನಂತರ ಸುಳ್ಳು ಆರೋಪ ಬರಬಾರದು ಎಂದು ತಂಡದ ಸದಸ್ಯ ಅಶೋಕ್ ಮಲ್ಹೋತ್ರಾ ಅವರಿಗೆ ಆರಂಭದಲ್ಲಿ ವಿಚಾರಣೆ ಎದುರಿಸಲು ಸೂಚಿಸಿದೆ. ಅದಕ್ಕೂ ಮೋದಿ ಸಿದ್ದವಾಗಿ ಕುಳಿತರು ಎಂದು ಮಾಜಿ ಪೊಲೀಸ್ ಅಧಿಕಾರಿ ರಾಘವನ್ ಹೇಳಿದ್ದಾರೆ.

ನಂತರ ನನ್ನ ಚೇಂಬರ್ ನಲ್ಲಿ ಮೋದಿಯವರನ್ನು ಸತತ 9 ಗಂಟೆಗಳ ಕಾಲ ವಿಚಾರಣೆ ಮಾಡಲಾಯಿತು. ತಡರಾತ್ರಿಯವರೆಗೆ ವಿಚಾರಣೆ ಸಾಗಿದ್ದರೂ ಮೋದಿಯವರು ತಾಳ್ಮೆಯಿಂದ ಕುಳಿತಿದ್ದರು ಎಂದು ರಾಘವನ್ ಹೇಳಿದ್ದಾರೆ.

ವಿಚಾರಣೆ ವೇಳೆ ಯಾವೊಂದು ಪ್ರಶ್ನೆಗೂ ಉತ್ತರಿಸದೆ ಉಳಿಯಲಿಲ್ಲ. ಪ್ರತಿಕ್ರಿಯೆ ನೀಡುವಾಗ ತಾಳ್ಮೆಯಿಂದ, ಉತ್ಸಾಹದಿಂದಲೇ ವಿವರಿಸುತ್ತಿದ್ದರು. ಮಧ್ಯಾಹ್ನ ಊಟಕ್ಕೆ ವಿರಾಮ ನೀಡಬೇಕೆ ಎಂದು ಕೇಳಿದ್ದಾಗ ಬೇಡವೆಂದಿದ್ದರು. ಅವರೇ ಕುಡಿಯಲು ನೀರು ಬಾಟಲ್ ತಂದಿದ್ದರು. ಒಂದು ಕಪ್ ಚಹವನ್ನು ಕೂಡ ನಮ್ಮ ಕಚೇರಿಯಲ್ಲಿ ಸೇವಿಸಲಿಲ್ಲ. ಅಷ್ಟು ಶಕ್ತಿ, ಉತ್ಸಾಹ, ಏಕಾಗ್ರತೆ ಇರುವ ವ್ಯಕ್ತಿ ಅವರು ಎಂದು ಹಾಡಿಹೊಗಳಿದ್ದಾರೆ.

2002ರ ಗುಜರಾತ್ ಗಲಭೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2012ರ ಫೆಬ್ರವರಿಯಲ್ಲಿ ಎಸ್ಐಟಿ ಮುಚ್ಚಳಿಕೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಮೋದಿ ಸೇರಿದಂತೆ 64 ಮಂದಿಗೆ ಕ್ಲೀನ್ ಚಿಟ್ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com