ಜೆಇಇ ಪರೀಕ್ಷೆಯಲ್ಲಿ 99.8% ಗಳಿಸಿದ್ದ ಅಭ್ಯರ್ಥಿ ನಕಲಿ: ವೈದ್ಯರಾಗಿರುವ ತಂದೆಯೂ ಶಾಮೀಲು, ಬಂಧನ!

ಜೆಇಇ ಪರೀಕ್ಷೆಯಲ್ಲಿ ಶೇ.99.8 ರಷ್ಟು ಗಳಿಸಿದ್ದ ಅಭ್ಯರ್ಥಿ ತನ್ನ ಪರವಾಗಿ ಬೇರೆಯವರ ಮೂಲಕ ಪರೀಕ್ಷೆ ಬರೆಸಿದ್ದು ಈಗ ಬಹಿರಂಗವಾಗಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಗುವಾಹಟಿ: ಜೆಇಇ ಪರೀಕ್ಷೆಯಲ್ಲಿ ಶೇ.99.8 ರಷ್ಟು ಗಳಿಸಿದ್ದ ಅಭ್ಯರ್ಥಿ ತನ್ನ ಪರವಾಗಿ ಬೇರೆಯವರ ಮೂಲಕ ಪರೀಕ್ಷೆ ಬರೆಸಿದ್ದು ಈಗ ಬಹಿರಂಗವಾಗಿದೆ. 

ಅಸ್ಸಾಂ ನಲ್ಲಿ ಈ ಘಟನೆ ವರದಿಯಾಗಿದ್ದು ತನ್ನ ಪರವಾಗಿ ಪರೀಕ್ಷೆ ಬರೆಯುವುದಕ್ಕಾಗಿ ತನ್ನ ಸೋಗಿನಲ್ಲಿ ಬೇರೊಬ್ಬನನ್ನು ಕಳಿಸಿ ಶೇ.99.8 ರಷ್ಟು ಅಂಕ ಗಳಿಸಿದ್ದ, ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಅಪರಾಧವೆಸಗಿರುವ ಅಭ್ಯರ್ಥಿಯ ತಂದೆ ವೈದ್ಯರಾಗಿದ್ದು ಅವರೂ ಸೇರಿದಂತೆ ಈ ಘಟನೆಯಲ್ಲಿ ಶಾಮೀಲಾಗಿದ್ದ ಇತರ 3 ಮಂದಿಯನ್ನು ಬಂಧಿಸಲಾಗಿದೆ. 

ಸೆ.05 ರಂದು ಗುವಾಹಟಿ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಈ ಅಭ್ಯರ್ಥಿ ಹಾಜರಾಗಿರಲಿಲ್ಲ, ಆತನ ಪರವಾಗಿ ಬೇರೊಬ್ಬರು ಪರೀಕ್ಷೆಗೆ ಹಾಜರಾಗಿದ್ದರು ಎಂಬ ಬಗ್ಗೆ ಮಿತ್ರದೇವ್ ಶರ್ಮಾ ಎಂಬುವವರಿಂದ ಅ.23 ರಂದು ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ 

ಜೆಇಇ ಮೇನ್ಸ್ ನಲ್ಲಿ ಈ ಅಭ್ಯರ್ಥಿ ಶೇ.99.8 ರಷ್ಟು ಅಂಕ ಗಳಿಸಿದ್ದಾನೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ಒಟ್ಟು 5 ಮಂದಿಯನ್ನು ಬಂಧಿಸಿದ್ದಾರೆ.

ಅಭ್ಯರ್ಥಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿರುವಾಗ ತಪ್ಪನ್ನು ಒಪ್ಪಿಕೊಂಡಿರುವುದು ರೆಕಾರ್ಡ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಂಚನೆಯಲ್ಲಿ ಗುವಾಹಟಿಯ ಖಾಸಗಿ ಕೋಚಿಂಗ್ ಇನ್ಸ್ಟಿಟ್ಯೂಟ್ ಕೂಡ ಶಾಮೀಲಾಗಿದೆ ಎಂದು ಶಂಕಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com