ಉಗ್ರರಿಗೆ ಆರ್ಥಿಕ ನೆರವು: ಶ್ರೀನಗರ, ದೆಹಲಿ ಎನ್'ಜಿಒ, ಟ್ರಸ್ಟ್'ಗಳ ಮೇಲೆ ಎನ್ಐಎ ದಾಳಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೇಶದ ವಿವಿಧೆಡೆ ನಡೆಸುತ್ತಿರುವ ದಾಳಿಗಳು ಗುರುವಾರ ಕೂಡ ಮುಂದುವರೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೇಶದ ವಿವಿಧೆಡೆ ನಡೆಸುತ್ತಿರುವ ದಾಳಿಗಳು ಗುರುವಾರ ಕೂಡ ಮುಂದುವರೆದಿದೆ. 

ರಾಷ್ಟ್ರ ರಾಜಧಾನಿ ಹಾಗೂ ಶ್ರೀನಗರದಲ್ಲಿರುವ ಕೆಲ ಎನ್'ಜಿಒ, ಟ್ರಸ್ಟ್'ಗಳು ಹಾಗೂ ಸಾಮಾಜಿಕ ಹೋರಾಟಗಾರರ ಕಚೇರಿಗಳ ಮೇಲೆ ಇಂದು ಎನ್ಐಎ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

ದಾಳಿ ವೇಳೆ ಹಲವು ಅಪಾದನೆಗೆ ಗುರಿಯಾಗುವಂತಹ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

ದೆಹಲಿ ಹಾಗೂ ಶ್ರೀನಗರದಲ್ಲಿರುವ 6 ಎನ್'ಜಿಒ ಮತ್ತು ಟ್ರಸ್ಟ್ ಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಫಲಾ-ಇ-ಆಮ್ ಟ್ರಸ್ಟ್, ಚಾರಿಟಿ ಅಲೈಯನ್ಸ್, ಹ್ಯೂಮನ್ ವೆಲ್ಫೇರ್ ಫೌಂಡೇಶನ್, ಜೆಕೆ ಯತೀಮ್ ಫೌಂಡೇಶನ್, ಸಾಲ್ವೇಶನ್ ಮೂವ್ಮೆಂಟ್ ಮತ್ತು ಜೆ & ಕೆ ವಾಯ್ಸ್ ಆಫ್ ವಿಕ್ಟಿಮ್ಸ್ (ಜೆಕೆವಿಒವಿ) ಎಂಬ ಟ್ರಸ್ಟ್ ಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ. 

ನಿನ್ನೆ ಕೂಡ ಎನ್ಐಎ ಬೆಂಗಳೂರು ಒಂದು ಮತ್ತು ಶ್ರೀನಗರ, ಬಂಡಿಪೋರಾದಲ್ಲಿ 10 ಪ್ರದೇಶಗಳ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು. 

ಜಮ್ಮು-ಕಾಶ್ಮೀರದ ಸಿವಿಲ್‌ ಸೊಸೈಟಿಯ ಸಹ ಸಂಚಾಲಕ ಖುರ್ರಂ ಪರ್ವೇಜ್‌ ಹಾಗೂ ಅವರ ಸಹಚರರಾದ ಪತ್ರಕರ್ತ ಪರ್ವೇಜ್‌ ಬುಖಾರಿ, ಬೆಂಗಳೂರು ಮೂಲದ ಸ್ವಾತಿ ಶೇಷಾದ್ರಿ, ಪರ್ವೇಜ್‌ ಅಹ್ಮದ್‌ ಮಟ್ಟಾ, ‘ಅಸೋಸಿಯೇಷನ್‌ ಆಫ್‌ ಪೇರೆಂಟ್ಸ್‌ ಆಫ್‌ ಡಿಸ್‌ಅಪಿಯರ್ಡ್‌ ಪರ್ಸನ್ಸ್‌’ ಸಂಸ್ಥೆಯ ಮುಖ್ಯಸ್ಥೆ ಪ್ರರ್ವಿನಾ ಅಹಾಂಜರ್‌ ಸೇರಿದಂತೆ ಹಲವರ ನಿವಾಸದ ಮೇಲೆ ದಾಳಿ ನಡೆಸಿತ್ತು. 

ಸ್ಥಳೀಯ ಪೊಲೀಸ್‌ ಹಾಗೂ ಅರೆಸೇನಾ ಪಡೆಗಳ ನೆರವಿನೊಂದಿಗೆ ಎನ್‌ಐಎ ಶ್ರೀನಗರ, ಬಂಡಿಪೋರಾ ಹಾಗೂ ಬೆಂಗಳೂರಿನಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಿದೆ. ಎನ್‌ಜಿಒ ಅಥರೌಟ್‌ ಮತ್ತು ಜೆಕೆ ಟ್ರಸ್ಟ್‌ಗಳ ಕಚೇರಿ ಮೇಲೂ ಶೋಧ ನಡೆಸಿತ್ತು.

ಈ ನಡುವೆ ಎನ್ಐಎ ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದ ಪಿಡಿಪಿ,  ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಆರೋಪಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com