ಜಮ್ಮು-ಕಾಶ್ಮೀರದಲ್ಲಿ 3 ಬಿಜೆಪಿ ನಾಯಕರ ಹತ್ಯೆ: ದಾಳಿಯ ಹೊಣೆ ಹೊತ್ತುಕೊಂಡ ಲಷ್ಕರ್ ಬೆಂಬಲಿತ ರೆಸಿಸ್ಟೆನ್ಸ್ ಫ್ರಂಟ್

ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ ಗುಂಡಿಕ್ಕಿ ಹತ್ಯೆಗೊಂಡ ಮೂವರು ಬಿಜೆಪಿ ಕಾರ್ಯಕರ್ತರ ಸಾವಿನ ಹೊಣೆಯನ್ನು ಲಷ್ಕರ್ ಇ ತೊಯ್ಬಾ ಗುಂಪಿನ ಆಶ್ರಯದಲ್ಲಿರುವ ದ ರೆಸಿಸ್ಟೆಂಟ್ ಫ್ರಂಟ್(ಟಿಆರ್ ಎಫ್) ಹೊತ್ತುಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ ಗುಂಡಿಕ್ಕಿ ಹತ್ಯೆಗೊಂಡ ಮೂವರು ಬಿಜೆಪಿ ಕಾರ್ಯಕರ್ತರ ಸಾವಿನ ಹೊಣೆಯನ್ನು ಲಷ್ಕರ್ ಇ ತೊಯ್ಬಾ ಗುಂಪಿನ ಆಶ್ರಯದಲ್ಲಿರುವ ದ ರೆಸಿಸ್ಟೆಂಟ್ ಫ್ರಂಟ್(ಟಿಆರ್ ಎಫ್) ಹೊತ್ತುಕೊಂಡಿದೆ.

ನಿನ್ನೆ ಸಾಯಂಕಾಲ ಕುಲ್ಗಾಮ್ ಜಿಲ್ಲೆಯ ವೈ ಕೆ ಪೊರಾ ಪ್ರದೇಶದಲ್ಲಿ ಉಗ್ರಗಾಮಿಗಳಿಂದ ಫಿಡಾ ಹುಸೇನ್, ಉಮರ್ ಹಜಮ್ ಮತ್ತು ಉಮರ್ ರಶೀದ್ ಬೈಗ್ ಗುಂಡಿನ ದಾಳಿಗೆ ಸಿಕ್ಕಿ ಬಲಿಯಾಗಿದ್ದರು. ತಕ್ಷಣವೇ ಮೂವರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಘಟನೆಯ ಬಳಿಕ ಟಿಆರ್ ಎಫ್ ಸೋಷಿಯಲ್ ಮೀಡಿಯಾದಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ್ದು, ಸ್ಮಶಾನಗಳು ಹೆಚ್ಚು ಬುಕ್ಕಿಂಗ್ ಆಗಿವೆ ಎಂದು ಬರೆದುಕೊಂಡಿದೆ.

ಕಳೆದ ಜೂನ್ ತಿಂಗಳಿನಿಂದ ಉಗ್ರರು ಕಣಿವೆ ಪ್ರದೇಶದಲ್ಲಿ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಲೇ ಬಂದಿದ್ದಾರೆ. ಇದುವರೆಗೆ 8 ಮಂದಿ ಮೃತಪಟ್ಟಿದ್ದಾರೆ.

ಈ ಮಧ್ಯೆ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ನಾಗರಿಕನೊಬ್ಬನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ, ಬಿಜೆಪಿ ಅಧ್ಯಕ್ಷ, ಲೆ.ಗವರ್ನರ್ ಖಂಡನೆ: ನಿನ್ನೆ ಬಿಜೆಪಿ ಕಾರ್ಯಕರ್ತರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಖಂಡಿಸಿದ್ದಾರೆ.

ಮೂವರು ಯುವ ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ನಾನು ಖಂಡಿಸುತ್ತೇನೆ, ಜಮ್ಮು-ಕಾಶ್ಮೀರದಲ್ಲಿ ಅವರು ಉತ್ತಮ ಕೆಲಸವನ್ನು ಮಾಡುತ್ತಿದ್ದರು, ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನನ್ನು ಕೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಹೇಡಿ ಕೃತ್ಯದಲ್ಲಿ ಮೂವರು ಬಿಜೆಪಿ ನಾಯಕರು ಮೃತಪಟ್ಟಿದ್ದಾರೆ. ಇಂತವರ ಸಾವು ಪಕ್ಷಕ್ಕೆ ಮತ್ತು ದೇಶಕ್ಕೆ ಬಹುದೊಡ್ಡ ನಷ್ಟ, ಅವರ ತ್ಯಾಗ ನಿರುಪಯೋಗವಾಗಲು ಬಿಡುವುದಿಲ್ಲ. ಅವರ ಕುಟುಂಬಸ್ಥರಿಗೆ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ನಿನ್ನೆಯ ಹತ್ಯೆಯನ್ನು ಬಲವಾಗಿ ಖಂಡಿಸಿದ್ದಾರೆ. ಹಿಂಸಾಚಾರ ಮಾಡುವವರು ಮಾನವೀಯತೆಯ ಶತ್ರುಗಳು ಮತ್ತು ಇಂತಹ ಹೇಡಿತನ ಕೃತ್ಯಗಳನ್ನು ಸಮರ್ಥಿಸಲಾಗುವುದಿಲ್ಲ, ಕಾನೂನು ತನ್ನ ಕ್ರಮವನ್ನು ಕೈಗೆತ್ತಿಕೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com