ಕಾಂಗ್ರೆಸ್ ಪಾಲಿನ ಆಪತ್ಬಾಂಧವರಾಗಿದ್ದ ಪ್ರಣಬ್, ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು!

ಹಿರಿಯ ರಾಜಕಾರಣಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ ಅವರು 50 ವರ್ಷಗಳ ಸಾರ್ವಜನಿಕ ಬದುಕಿನ ಯಾತ್ರೆ ಹಾಗೂ ಸೇನಾ ಆಸ್ಪತ್ರೆಯಲ್ಲಿ 21 ದಿನಗಳ ನೋವಿನ ಯಾತ್ರೆ ಎರಡನ್ನೂ ಮುಗಿಸಿ ಮರಳಿ ಬಾರದ ಊರಿಗೆ ಹೋಗಿದ್ದಾರೆ.
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ನವದೆಹಲಿ: ಹಿರಿಯ ರಾಜಕಾರಣಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ ಅವರು 50 ವರ್ಷಗಳ ಸಾರ್ವಜನಿಕ ಬದುಕಿನ ಯಾತ್ರೆ ಹಾಗೂ ಸೇನಾ ಆಸ್ಪತ್ರೆಯಲ್ಲಿ 21 ದಿನಗಳ ನೋವಿನ ಯಾತ್ರೆ ಎರಡನ್ನೂ ಮುಗಿಸಿ ಮರಳಿ ಬಾರದ ಊರಿಗೆ ಹೋಗಿದ್ದಾರೆ.

ಅಜಾತಶತ್ರು ಎಂದು ಭಾಹತೀಯ ರಾಜಕೀಯ ಇತಿಹಾಸದಲ್ಲಿ ಗುರುತಿಸಬಹುದಾದ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಪ್ರಣಬ್ ಮುಖರ್ಜಿ ಕೂಡ ಒಬ್ಬರು. 

ಪ್ರಣಬ್ ಮುಖರ್ಜಿಯವರು ಜನಿಸಿದ್ದು 1935ರ ಡಿಸೆಂಬರ್ 11ರಂದು. ಪಶ್ಚಿಮ ಬಂಗಾಳದ ಬೀರ್ ಭೂಮ್ ಜಿಲ್ಲೆ ಕಿರ್ನಾಹರ್ ಬಳಿ ಇರುವ ಮಿರಾತಿ ಎಂಬ ಹಳ್ಳಿಯಲ್ಲಿ. ಪ್ರಣಬ್ ತಂದೆ ಕಮಡ ಕಿಂಕರ್ ಮುಖರ್ಜಿ. ತಾಯಿ ರಾಜಲಕ್ಷ್ಮಿ ಮುಖರ್ಜಿ. ಅವರು 1920ರಿಂದಲೂ ಕಾಂಗ್ರೆಸ್'ನ ಸಕ್ರಿಯ ಕಾರ್ಯಕರ್ತರಾಗಿದ್ದವರು. ಎಐಸಿಸಿ ಸದಸ್ಯರೂ ಆಗಿದ್ದರು. 1952ರಿಂದ 64ರವರೆಗೆ ಪಶ್ಚಿಮ ಬಂಗಾಳ ವಿಧಾನಪರಿಷತ್ ಸದಸ್ಯರಾಗಿದ್ದರು. ಬೀರ್ ಭೂಮ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೂಡ ಆಗಿದ್ದರು. ಕಮಡ ಕಿಂಕರ್ ಅವರು ಬ್ರಿಟಿಷ್ ಆಡಳಿತಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಅವರನ್ನು 10ಕ್ಕೂ ಹೆಚ್ಚು ವರ್ಷಗಳ ಕಾಲ ಜೈಲಿನಲ್ಲಿಡಲಾಗಿತ್ತು. ತಂದೆಯ ರಾಜಕಾರಣವನ್ನು ಹತ್ತಿರದಿಂದ ನೋಡಿದ್ದ ಪ್ರಣಬ್ ಅವರೂ ಕೂಡ ರಾಜಕೀಯದಲ್ಲಿ ಪಳಗಿ ಕಾಂಗ್ರೆಸ್'ನ ನಾಯಕರಾಗುವಷ್ಟರ ಮಟ್ಟಕ್ಕೆ ಬೆಳೆದರು. 

ದಶಕಗಳ ಕಾಲ ಸಕ್ರಿಯ ರಾಜಕೀಯದಲ್ಲಿ ಯಶಸ್ವಿಯಾಗಿದ್ದ ಪ್ರಣಬ್ ಮುಖರ್ಜಿಯವರನ್ನು 2012ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ತನ್ನ ಅಭ್ಯರ್ಥಿಯಾಗಿ ಪಿ.ಎ.ಸಂಗ್ಮಾ ಕಣಕ್ಕೆ ಇಳಿದಿದ್ದರು. ಬಹಮತ ಹೊಂದಿದ್ದ ಯುಪಿಎ ಸುಲಭವಾಗಿ ಬಹುಮತದಿಂದ ಪ್ರಣಬ್ ಅವರನ್ನು ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಯಿತು. ಹೀಗೆ 2012ರ ಜುಲೈ 25 ರಂದು ಅಧಿಕಾರ ಸ್ವೀಕರಿಸಿ 2017ರ ಜುಲೈ 25ರವರೆಗೆ ಯಶಸ್ವಿಯಾಗಿ ಆ ಹುದ್ದೆಯನ್ನು ನಿರ್ವಹಿಸಿದರು. ರಾಷ್ಟ್ರಪತಿಯಾಗಿ ಒಂದು ವರ್ಷ ಪೂರೈಸಿದ ದಿನ ರಾಷ್ಟ್ರಪದತಿ ಭವನವು ಹಲವು ಘೋಷಣೆಗಳನ್ನು ಮಾಡಿತು. 

ರಾಷ್ಟ್ರಪತಿಗಳನ್ನು ಹಿಸ್ ಎಕ್ಸಲೆನ್ಸಿ ಎಂದು ಕರೆವ ಸಂಪ್ರದಾಯಕ್ಕೆ ತೆರೆ ಎಳೆಯಲಾಯಿತು. ರಾಜ್ಯಪಾಲರಿಗೂ ಇದೇ ಸಂಪ್ರದಾಯ ಪಾಲಿಸುವಂತೆ ಸೂಚಿಸಲಾಯಿತು. ರಾಷ್ಟ್ರಪತಿ ಭವನಕ್ಕೆ ಆಗಮಿಸುವ ಗಣ್ಯರು ಮತ್ತು ಜನಸಾಮಾನ್ಯರ ತಪಾಸಣೆ ಪ್ರಕ್ರಿಯೆಗಳನ್ನು ಬಹಳಷ್ಟು ಸರಳಗೊಳಿಸಲಾಯಿತು. 

ತಮ್ಮ ಅವಧಿಯಲ್ಲಿ ಪ್ರಣಬ್ 26 ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದರು. ಜೊತೆಗೆ ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಕೋರಿದ್ದ 30 ಕ್ಷಮಾದಾನ ಅರ್ಜಿ ತಿರಸ್ಕರಿಸದರು. ಕೇವಲ 4 ಅರ್ಜಿಗಳನ್ನು ಮಾತ್ರವೇ ಮಾನ್ಯ ಮಾಡಿದರು.

ರಾಷ್ಟ್ರಪತಿಯಾಗಿ ಶಾಲೆಯಲ್ಲಿ ಪಾಠ ಮಾಡಿದ ಏಕೈಕ ವ್ಯಕ್ತಿ ಪ್ರಣಬ್. ರಾಷ್ಟ್ರಪತಿ ಭವನದ ಆವರಣದಲ್ಲಿರುವ ರಾಜೇಂದ್ರ ಪ್ಸಾದ್ ಸರ್ವೋದಯ ವಿದ್ಯಾಲಯದಲ್ಲಿನ 11 ಮತ್ತು 12ನೇ ತರಗತಿಯ ಸುಮಾರು 80 ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ಕುದುರೆಗಳನ್ನು ಕಟ್ಟಲು ಬಳಸಲಾಗುತ್ತಿದ್ದ ಜಾಗವನ್ನೇ ಬಳಸಿಕೊಂಡು ಅತ್ಯಾಧುನಿಕ ವಸ್ತು ಸಂಗ್ರಹಾಲಯವೊಂದನ್ನು ಪ್ರಣಬ್ ಆರಂಭಿಸಿದರು. ರಾಷ್ಟ್ರಪತಿ ಭವನದಲ್ಲಿ ಪಾಳು ಕಟ್ಟಡವೊಂದನ್ನು ದುರಸ್ತಿಗೊಳಿಸಿ ಅಲ್ಲಿ ಸಾರ್ವಜನಿಕ ಲೈಬ್ರರಿಯೊಂದನ್ನು ಪ್ರಣಬ್ ಆರಂಭಿಸಿದ್ದರು. ದಾಖಲೆಯ 5 ತಿಂಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡು 2013ರ ಜು.2ಕ್ಕೆ ಲೈಬ್ರರಿ ಆರಂಭವಾಯಿತು. 

ಪ್ರಣಬ್ ಮುಖರ್ಜಿಯವರು 50ಕ್ಕೂ ಹೆಚ್ಚು ವರ್ಷಗಳಿಂದ ರಾಷ್ಟ್ರ ರಾಜಕಾರಣದಲ್ಲಿದ್ದರು. ಆದರೆ, 2004ರವರೆಗೂ ಅವರು ಲೋಕಸಭೆಗೆ ಆರಿಸಿ ಬಂದಿರಲಿಲ್ಲ ಎಂದರೆ ನೀವು ನಂಬಲೇಬೇಕು. ಕೇಂದ್ರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅವರು ತಮ್ಮ ರಾಜಕಾರಣಕ್ಕೆ ಆರಿಸಿಕೊಂಡಿದ್ದು ರಾಜ್ಯಸಭೆಯನ್ನು. ಈ ನಡುವೆ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೂ ಉಂಟು. 2004ರಲ್ಲಿ ಸುರಕ್ಷಿತ ಕ್ಷೇತ್ರ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳದ ಜಂಗೀಪುರದಲ್ಲಿ ಚುನಾವಣಾ ಅಖಾಡಕ್ಕೆ ಇಳಿದು ಗೆದ್ದು ಬಂದರು. ಲೋಕಸಭೆ ಚುನಾವಣೆಯಲ್ಲಿ ಅದು ಅವರ ಜೀವನದ ಮೊದಲ ಗೆಲುವಾಗಿತ್ತು. ಆನಂತರ 2009ರಲ್ಲಿ ಪುನಾರಾಯ್ಕೆಯಾದರು. 

ಪ್ರಣಬ್ ಅವರು ಆರಂಭದಿಂದಲೂ ಇಂದಿರಾಗಾಂಧಿಯವರ ಕುಟುಂಬಕ್ಕೆ ನಿಷ್ಠಾವಂತ ವ್ಯಕ್ತಿಯಾಗಿದ್ದರು. 1969ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದ ಅವರು 1975, 1981, 1993 ಹಾಗೂ 1999ರಲ್ಲಿ ಪುನರಾಯ್ಕೆಯಾದರು. 2 ಬಾರಿ ಲೋಕಸಭೆ ಸದಸ್ಯರಾದರು. 1997ರಲ್ಲಿ ಶ್ರೇಷ್ಠ ಸಂಸದೀಯ ಪಟು ಎಂಬ ಮೆಚ್ಚುಗೆ ಗಳಿಸಿದ್ದರು. ಕಾಂಗ್ರೆಸ್ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. 

ಪ್ರಧಾನಿ ಹುದ್ದೆ ಸಿಗಲೇ ಇಲ್ಲ...
ನಿಜ, ಮುಖರ್ಜಿ ಪ್ರಧಾನಿಯಾಗಲಿಲ್ಲ ಆದರೆ ಪ್ರಧಾನಿಗಳಿಂದ “ ಸರ್’ ಎಂದು ಕರೆಸಿಕೊಳ್ಳುವ, ಅವರಿಂದ ಗೌರವ ಪಡೆಯುವ ಇನ್ನೂ ಎತ್ತರದ ಸ್ಥಾನಕ್ಕೆ ಅವರು ಹೋದದ್ದು ಬದುಕಿನ ವಿಶೇಷತೆಗಳಲ್ಲಿ ಒಂದು ಎಂಬುದನ್ನು ದೇಶದ ರಾಜಕೀಯ ಇತಿಹಾಸ ಎಂದೂ ಮರೆಯುವಂತಿಲ್ಲ.

2004ರಲ್ಲಿ ಕಾಂಗ್ರೆಸ್ ಮಿತ್ರಕೂಟಕ್ಕೆ ಬಹುಮತ ಲಭಿಸಿದಾಗ ಕಾಂಗ್ರೆಸ್ ನಲ್ಲಿ ಪ್ರಣಬ್ ಹಿರಿಯ ನಾಯಕರಾಗಿದ್ದರೂ ಹೈಕಮಾಂಡ್ ಮನಮೋಹನಸಿಂಗ್ ಅವರನ್ನು ಪರಿಗಣಿಸಿತು. ತಮಗೆ ಹಿಂದಿ ಮೇಲೆ ಹಿಡಿತವಿಲ್ಲದಿರುವುದರಿಂದ ತಾವು ಪ್ರಧಾನಿಯಾಗಲು ಆಗುತ್ತಿಲ್ಲ ಎಂದು ಒಮ್ಮೆ ಪ್ರಣಬ್ ಅವರೇ ಹೇಳಿಕೊಂಡಿದ್ದರು. ಯುಪಿಎ ಸರ್ಕಾರದಲ್ಲಿ ಪ್ರಣಬ್ ನಂ.2 ಸ್ಥಾನದಲ್ಲಿದ್ದರು. ಮನಮೋಹನ ಸಿಂಗ್ ಅವರು ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ ಪ್ರಣಬ್ ಅವರೇ ಸರ್ಕಾರ ನಿರ್ವಹಿಸಿದ್ದರು. ಒಂದು ವೇಳೆ ಮುಖರ್ಜಿ ಪ್ರಧಾನಿಯಾಗಿದ್ದರೆ ಆ ಹುದ್ದೆ ಅಲಂಕರಿಸಿದ ಮೊತ್ತಮೊದಲ ಬಂಗಾಳಿ ವ್ಯಕ್ತಿಯಾಗುತ್ತಿದ್ದರು. 

ಸೋನಿಯಾಗೆ ಮಾರ್ಗದರ್ಶಕರಾಗಿ ನಿಂತವರು ಪ್ರಣಬ್ ಮುಖರ್ಜಿ. ಪ್ರಣಬ್'ಗೆ ಅಪಾರ ನೆನಪಿನ ಶಕ್ತಿ ಇತ್ತು. ಹಿಂದಿನ ಅನೇಕ ಘಟನೆಗಳು ಅವರ ಸ್ಮೃತಿಪಟಲದಲ್ಲಿದ್ದವು. ಕಾಂಗ್ರೆಸ್ ನಾಯಕರು ಅವರನ್ನು ನಡೆದಾಡುವ ವಿಶ್ವಕೋಶ ಎಂದೇ ಕರೆಯುತ್ತಿದ್ದರು. ಇಂದಿರಾರ ಕ್ರಮಗಳನ್ನು ಸೋನಿಯಾಗೆ ವಿವರಿಸಿ ಸಂಕಷ್ಟಕ್ಕೆ ಹೊಸ ಪರಿಹಾರ ಹುಡುಕುತಿದ್ದರು ಮುಖರ್ಜಿ. 

ಸುದೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ 2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರು ಟ್ರಬಲ್ ಶೂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರತಿಯೊಂದಕ್ಕೂ ತಗಾದೆ ತೆಗೆಯುತ್ತಿದ್ದ ಎಡಪಕ್ಷಗಳನ್ನು 4 ವರ್ಷ ಸಂಭಾಳಿಸಿದ್ದು ಮನಮೋಹನ್ ಸಿಂಗ್ ಅಲ್ಲ, ಸೋನಿಯಾ ಗಾಂಧಿ ಅಲ್ಲ. ಪ್ರಣಬ್ ಮುಖರ್ಜಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com