ವಿಜಯವಾಡದಲ್ಲಿ ಮತ್ತೊಂದು ಕೈಗಾರಿಕಾ ದುರಂತ, ಸ್ಫೋಟದಲ್ಲಿ 2 ಸಾವು!
ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ವಿಜಯವಾಡದಲ್ಲಿ ಮತ್ತೊಂದು ಕೈಗಾರಿಕಾ ದುರಂತ ಸಂಭವಿಸಿದ್ದು, ಕೈಗಾರಿಕಾ ಎಸ್ಟೇಟ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
Published: 03rd September 2020 05:04 PM | Last Updated: 03rd September 2020 05:04 PM | A+A A-

ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ
ನವದೆಹಲಿ: ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ವಿಜಯವಾಡದಲ್ಲಿ ಮತ್ತೊಂದು ಕೈಗಾರಿಕಾ ದುರಂತ ಸಂಭವಿಸಿದ್ದು, ಕೈಗಾರಿಕಾ ಎಸ್ಟೇಟ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ವಿಜಯವಾಡದ ಸುರಂಪಲ್ಲಿ ಕೈಗಾರಿಕಾ ಪ್ರದೇಶದಲ್ಲಿರುವ ಜಯರಾಜ್ ಎಂಟರ್ ಪ್ರೈಸಸ್ ನಲ್ಲಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ ಕೋಟೇಶ್ವರ ರಾವ್ ಮತ್ತು ಮಗ ಚಿನ್ನಾ ರಾವ್ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಇಬ್ಬರೂ ಕೈಗಾರಿಕಾ ಪ್ರದೇಶದ ಸ್ಕ್ರ್ಯಾಪ್ ಖರೀದಿ ಮಾಡಲು ತೆರಳಿದ್ದರು ಎನ್ನಲಾಗಿದೆ. ಜಯರಾಜ್ ಎಂಟರ್ ಪ್ರೈಸಸ್ ನಲ್ಲಿ ಕೆಲ ಕೆಲಸಗಾರರು ಕೆಮಿಕಲ್ ಡ್ರಮ್ ಗಳನ್ನು ಆಟೋಗೆ ತುಂಬುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಕೋಟೇಶ್ವರ ರಾವ್ ಮತ್ತು ಚಿನ್ನಾ ರಾವ್ ಮೃತಪಟ್ಟಿದ್ದಾರೆ.
ಸ್ಫೋಟದ ರಭಸಕ್ಕೆ ಅಲ್ಲಿದ್ದ ಶೆಡ್ ನ ರೂಫ್ ಗಳು ಹಾರಿಹೋಗಿದ್ದು, ಅಲ್ಲಿದ್ದ ಕಾರ್ಮಿಕರ ಪೈಕಿ ಹಲವು ಕಾರ್ಮಿಕರು ಕೂಡ ಚದುರಿ ಹೋಗಿದ್ದು, 50 ಮೀಟರ್ ಗಳ ವರೆಗೂ ಹಾರಿ ಹೋಗಿದ್ದಾರೆ. ಅಲ್ಲದೆ ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಎನ್ ಡಿಆರ್ ಎಫ್ ಸಿಬ್ಬಂದಿ ದೌಡಾಯಿಸಿದ್ದು, ತನಿಖೆ ನಡೆಸಿದ್ದಾರೆ.