ನೀಟ್‌ ಪರೀಕ್ಷೆಗೆ ಹಾಜರಾಗಲು ವೀಸಾಗಾಗಿ ಕಾಯುತ್ತಿದ್ದಾರೆ ಮೂವರು ಪಾಕ್ ವಿದ್ಯಾರ್ಥಿಗಳು

ನೀಟ್ ಪರೀಕ್ಷೆ ಬರೆಯಲು ಭಾರತಕ್ಕೆ ಬರಲು ಉತ್ಸುಕವಾಗಿರುವ ಮೂವರು ಪಾಕಿಸ್ತಾನಿ ವಿದ್ಯಾರ್ಥಿಗಳು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ನಿಂದ ವೀಸಾ ಪಡೆಯುವುದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಪಾಕ್ ವಿದ್ಯಾರ್ಥಿಗಳು
ಪಾಕ್ ವಿದ್ಯಾರ್ಥಿಗಳು

ಜೈಪುರ: ನೀಟ್ ಪರೀಕ್ಷೆ ಬರೆಯಲು ಭಾರತಕ್ಕೆ ಬರಲು ಉತ್ಸುಕವಾಗಿರುವ ಮೂವರು ಪಾಕಿಸ್ತಾನಿ ವಿದ್ಯಾರ್ಥಿಗಳು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ನಿಂದ ವೀಸಾ ಪಡೆಯುವುದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಸೆಪ್ಟೆಂಬರ್ 13 ರಿಂದ ಪ್ರಾರಂಭವಾಗಲಿರುವ ನೀಟ್ ಪರೀಕ್ಷೆಗಾಗಿ ಸಿಂಧ್ ಪ್ರಾಂತ್ಯದ ಭೀಲ್ ಬುಡಕಟ್ಟು ಜನಾಂಗದ ಮೂವರು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಬೇಕಾಗಿದೆ. ಅವರ ತಂದೆ ಹಕೀಮ್ ಮಾಲ್ ಅವರು ವೈದ್ಯರಾಗಿದ್ದು, ತಮ್ಮ ಮೂವರೂ ಮಕ್ಕಳು ಸಹ ವೈದ್ಯರಾಗುವುದಕ್ಕಾಗಿ ಭಾರತದಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಬಯಸುತ್ತಿದ್ದಾರೆ.

ಅನಿತಾ ಮತ್ತು ಪುಷ್ಪಾ ಕುಮಾರಿ ಹಾಗೂ ಅವರ ಸಹೋದರ ಮಹೇಶ್ ಕುಮಾರ್ ಅವರ ನೀಟ್ ಪರೀಕ್ಷಾ ಪ್ರವೇಶ ಪತ್ರಗಳನ್ನು ಈಗಾಗಲೇ ನೀಡಲಾಗಿದೆ ಮತ್ತು ಅವರ ಪರೀಕ್ಷಾ ಕೇಂದ್ರ ಜೋಧಪುರದಲ್ಲಿದೆ. ಆದರೆ, ಅವರಿಗೆ ಇನ್ನೂ ವೀಸಾ ಸಿಕ್ಕಿಲ್ಲ.

ಈ ಮೂವರು ವಿದ್ಯಾರ್ಥಿಗಳ ಚಿಕ್ಕಪ್ಪ ಡಾ. ರವಿ ಭೀಲ್ 1990 ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು 2004ರಲ್ಲಿ ಭಾರತೀಯ ಪೌರತ್ವವನ್ನು ಪಡೆದರು. ಈಗ ಜೈಸಲ್ಮೇರ್‌ನಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಡಾ. ರವಿ ಅವರು ಮೂವರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಸುವುದಕ್ಕಾಗಿ ಎನ್‌ಆರ್‌ಐ ಕೋಟಾ ಅಡಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ವೀಸಾಗಾಗಿ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಅರ್ಜಿ ಸಲ್ಲಿಸಿದ್ದಾರೆ.

“ವೀಸಾ ಅರ್ಜಿಗಳನ್ನು ಪರಿಶೀಲಿಸುವವರೆಗೆ ಇಸ್ಲಾಮಾಬಾದ್‌ನಲ್ಲಿ ಇರುವಂತೆ ಭಾರತೀಯ ಹೈಕಮಿಷನ್ ವಿದ್ಯಾರ್ಥಿಗಳಿಗೆ ಸೂಚಿಸಿದೆ.ಮೂವರೂ ವಿದ್ಯಾರ್ಥಿಗಳ ಕರೋನಾ ವೈರಸ್ ವರದಿ ನೆಗಟಿವ್ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಭಾರತೀಯ ಹೈಕಮಿಷನ್ ಶೀಘ್ರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಅವರು ಈ ಪ್ರಕರಣವನ್ನು ಮಾನವೀಯ ಆಧಾರದ ಮೇಲೆ ನಿಭಾಯಿಸುತ್ತಾರೆ ಮತ್ತು ವಿದ್ಯಾರ್ಥಿಗಳಿಗೆ ತುರ್ತು ಆಧಾರದ ಮೇಲೆ ವೀಸಾ ನೀಡುತ್ತಾರೆ ಎಂದು ಭಾವಿಸುವುದಾಗಿ” ಡಾ. ರವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com