ಕೋವಿಡ್-19, ಶಾಸಕರ ವಿರೋಧಗಳ ನಡುವೆ ಮಹಾರಾಷ್ಟ್ರ ವಿಧಾನಸಭೆಯ 2 ದಿನಗಳ ಮುಂಗಾರು ಅಧಿವೇಶನ ಆರಂಭ

ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದೆ.
ಮಹಾರಾಷ್ಟ್ರ ವಿಧಾನ ಭವನ
ಮಹಾರಾಷ್ಟ್ರ ವಿಧಾನ ಭವನ

ಮುಂಬೈ: ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದೆ. ಉಪಾಧ್ಯಕ್ಷ ನರಹರಿ ಝಿರ್ವಾಲ್, ಕೋವಿಡ್-19 ಹಿನ್ನೆಲೆಯಲ್ಲಿ ಸದಸ್ಯರು ಮಾಸ್ಕ್ ಧರಿಸುವಂತೆ, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಕ್ರಾಸ್ ಚಿಹ್ನೆಯಿರುವ ಸೀಟಿನಲ್ಲಿ ಕೂರದಂತೆ ಸದನದ ಸದಸ್ಯರಿಗೆ ಮಾರ್ಗದರ್ಶನ ನೀಡಿದರು.

ಇಬ್ಬರು ಕುಳಿತುಕೊಳ್ಳುವಲ್ಲಿ ಒಬ್ಬರು ಸದಸ್ಯರಿಗೆ ಮಾತ್ರ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸದನ ಸದಸ್ಯರು ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿಯಲ್ಲಿ ಸಹ ಕುಳಿತರು. ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ನಾನಾ ಪಟೊಲ್ ಅವರು ಕೊರೋನಾ ಪಾಸಿಟಿವ್ ಬಂದು ಗೈರಾಗಿರುವ ಹಿನ್ನೆಲೆಯಲ್ಲಿ ಉಪ ಸ್ಪೀಕರ್ ಸದನ ಕಲಾಪವನ್ನು ನಡೆಸಿದರು.

ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಜಿಎಸ್ ಟಿ ಮತ್ತು ಆಕಸ್ಮಿಕ ನಿಧಿಗೆ ಸಂಬಂಧಪಟ್ಟ ವಿಧೇಯಕಗಳನ್ನು ಮಂಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವುದು, ಮೇಯರ್ ಹುದ್ದೆಗಳ ಭರ್ತಿಗಳನ್ನು ಮುಂದೂಡುವಂತೆ ಗ್ರಾಮೀಣ ಮತ್ತು ನಗರಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದ ವಿಧೇಯಕಗಳನ್ನು ಸಹ ಮಂಡಿಸಲಾಯಿತು.

2020-21ನೇ ಸಾಲಿಗೆ ಸಂಬಂಧಿಸಿದ ಪೂರಕ ಬೇಡಿಕೆಗಳನ್ನು ಉಪ ಮುಖ್ಯಮಂತ್ರಿ ಮಂಡಿಸಿದರು. ಇದಕ್ಕೆ ಸಂಬಂಧಿಸಿದ ಚರ್ಚೆಗಳು ಸದನದಲ್ಲಿ ನಾಳೆ ನಡೆಯಲಿವೆ.

ಇಂದು ಮತ್ತು ನಾಳೆ ನಡೆಯುವ ಕಲಾಪದಲ್ಲಿ ಪ್ರಶ್ನೋತ್ತರ ಅವಧಿ, ಚರ್ಚೆಗಳು ಇರುವುದಿಲ್ಲ. ಕಳೆದ ನವೆಂಬರ್ ನಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಡಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಮುಂಗಾರು ಅಧಿವೇಶನ ಇದಾಗಿದೆ.

ಅಧಿವೇಶನ ಹಿನ್ನೆಲೆಯಲ್ಲಿ ನಿನ್ನೆಯವರೆಗೆ ಶಾಸಕರು, ಸಚಿವರು, ಅಧಿಕಾರಿಗಳು, ಶಾಸಕರ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ 2 ಸಾವಿರದ 115 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ 58 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com