ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ಸರ್ಕಾರಿ ವೈದ್ಯೆಗೆ ಮತ್ತೆ ಸೋಂಕು: ಚೆನ್ನೈನಲ್ಲಿ ಹೊಸ ಅತಂಕ

ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ಸರ್ಕಾರಿ ವೈದ್ಯೆಗೆ ಮತ್ತೆ ಸೋಂಕು ತಗುಲಿದ್ದು, ಇದು ಅತ್ಯಧಿಕ ಸೋಂಕಿನಿಂದ ತತ್ತರಿಸಿ ಹೋಗಿರುವ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಹೊಸ ಆತಂಕ ಸೃಷ್ಟಿ ಮಾಡಿದೆ.
ಕೊರೋನಾ ಆರ್ಭಟ
ಕೊರೋನಾ ಆರ್ಭಟ

ಚೆನ್ನೈ: ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ಸರ್ಕಾರಿ ವೈದ್ಯೆಗೆ ಮತ್ತೆ ಸೋಂಕು ತಗುಲಿದ್ದು, ಇದು ಅತ್ಯಧಿಕ ಸೋಂಕಿನಿಂದ ತತ್ತರಿಸಿ ಹೋಗಿರುವ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಹೊಸ ಆತಂಕ ಸೃಷ್ಟಿ ಮಾಡಿದೆ.

ಚೆನ್ನೈನ 35 ವರ್ಷದ ಸರ್ಕಾರಿ ವೈದ್ಯೆಗೆ ಕಳೆದ ಮೇ ನಲ್ಲಿ ಸೋಂಕಿಗೆ ತುತ್ತಾಗಿದ್ದರು. ಬಳಿಕ ಗುಣಮುಖರಾಗಿದ್ದ ಅವರಿಗೆ ಇದೀಗ ಮತ್ತೆ ಸೋಂಕು ಒಕ್ಕರಿಸಿದ್ದು, ಇದು ಚೆನ್ನೈನಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ತಮಿಳುನಾಡು ಆರೋಗ್ಯ ಇಲಾಖೆ, ಈ ಬಗ್ಗೆ ವೈದ್ಯಯ ಪತಿ ಮಾಹಿತಿ  ನೀಡಿದ್ದಾರೆ. ಅಧಿಕಾರಿಗಳು ಕೂಡ ಈ ಬಗ್ಗೆ ಗಂಭೀರ ಚಿಂತನೆಯಲ್ಲಿದ್ದು, ವಿಶ್ವದ ವಿವಿಧ ಭಾಗಗಳಲ್ಲಿ ಸೋಂಕಿನಿಂದ ಗುಣಮುಖರಾದವರು ಮತ್ತೆ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಒಮ್ಮೆ ಸೋಂಕು ತಗುಲಿ ಗುಣಮುಖರಾದರೆ ಆ ಸೋಂಕಿತನಲ್ಲಿ ಆ್ಯಂಟಿಬಾಡಿ ಉತ್ಪತ್ತಿಯಾಗುತ್ತದೆ. ಇಂತಹ ಆ್ಯಂಟಿಬಾಡಿಗಳು ಕೆಲ ತಿಂಗಳುಗಳವರೆಗೂ ಇರುತ್ತದೆ. ಇದಾಗ್ಯೂ ವೈದ್ಯೆಗೆ ಹೇಗೆ ಸೋಂಕು ತಗುಲಿತು ಎಂಬ ವಿಚಾರ ತಮಿಳುನಾಡು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. 

ಮೂಲಗಳ ಪ್ರಕಾರ ಸ್ತ್ರೀರೋಗತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯೆ ಮೇ 28ರಂದು ಸೋಂಕಿಗೆ ತುತ್ತಾಗಿದ್ದರು. ವೈದ್ಯೆಯ ಪತಿ ಕೂಡ ಸೋಂಕಿಗೆ ತುತ್ತಾಗಿದ್ದರು. ಬಳಿಕ ಅವರನ್ನು ಐಸೋಲೇಷನ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. 14 ದಿನಗಳ ಬಳಿಕ ಅವರು ಗುಣಮುಖರಾಗಿದ್ದರು. ಬಳಿಕ ನಡೆದ ಪರೀಕ್ಷೆಯಲ್ಲಿ  ನೆಗೆಟಿವ್ ಬಂದಿತ್ತು.  ಬಳಿಕ ಜೂನ್ ನಲ್ಲಿ ವೈದ್ಯ ಸೇವೆಗೆ ಮರಳಿದ್ದರು. 10 ದಿನಗಳ ಬಳಿಕ ಮತ್ತೆ ಆಕೆಯಲ್ಲಿ ಜ್ವರ ಮತ್ತು ಶ್ವಾಸಕೋಶದ ತೊಂದರೆ ಕಾಣಿಸಿಕೊಂಡಿತ್ತು. ಸಿಟಿ ಸ್ಕಾನ್ ಪರೀಕ್ಷೆಯಲ್ಲಿ ಕೋವಿಡ್ ಸೋಂಕಿರುವುದು ಪತ್ತೆಯಾಗಿತ್ತು. ಆದರೂ ಆಕೆಯ ಶೇ.20ರಷ್ಚು ಶ್ವಾಸಕೋಶ ಕಾರ್ಯನಿರ್ವಹಿಸುತ್ತಿತ್ತು. ಆರ್  ಟಿಪಿಸಿಆರ್ ಪರೀಕ್ಷೆಯಲ್ಲಿ ಆಕೆ ಸೋಂಕಿಗೆ ತುತ್ತಾಗಿರುವುದು ಪತ್ತೆಯಾಗಿತ್ತು. ಬಳಿಕ ಅವರನ್ನು ಸರ್ಕಾರಿ ಒಮಾಂಡುರಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯೆಯ ಪತಿ, ಬಹುಶಃ ಆಕೆ ಮೂರನೇ ಬಾರಿಗೆ ಸೋಂಕಿಗೆ ತುತ್ತಾಗಿರಬಹುದು ಎಂದು  ಶಂಕಿಸಿದ್ದಾರೆ.

ಚೆನ್ನೈನ ಖಾಸಗಿ ಆಸ್ಪತ್ರೆ ಪುರುಷ ಸಹಾಯಕ ಸಿಬ್ಬಂದಿ ಕೂಡ ಎರಡನೇ ಬಾರಿಗೆ ಸೋಂಕಿಗೆ ತುತ್ತಾಗಿದ್ದರು. ಮೇ ತಿಂಗಳಲ್ಲಿ ಸೋಂಕಿಗೆ ತುತ್ತಾಗಿದ್ದ ಅವರು ಗುಣುಮುಖರಾಗಿದ್ದರು. ಆದರೆ ಈಗ ಮತ್ತೆ ಅವರಲ್ಲಿ ಸೋಂಕು ದೃಢಪಟ್ಟಿದೆ. ಪ್ರಸ್ತುತ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಚೆನ್ನೈ ಸೇರಿದಂತೆ  ತಮಿಳುನಾಡಿನಲ್ಲಿ ಇಂತಹ ಹಲವು ಪ್ರಕರಣಗಳು ಇರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಸಮಿತಿ ರಚಿಸಿ ಕೂಲಂಕುಷ ವರದಿ ಪಡೆಯುತ್ತೇವೆ ಎಂದು  ಸಾರ್ವಜನಿಕ ಆರೋಗ್ಯಾಧಿಕಾರಿ ಡಾ ಕೆ ಕೋಲಂಡಸ್ವಾಮಿ ಹೇಳಿದ್ದಾರೆ.

ಇದೇ ವಿಚಾರವಾಗಿ ಐಸಿಎಂಆರ್ ಉಪನಿರ್ದೇಶಕರಾದ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ) ಪ್ರದೀಪ್ ಕೌರ್ ಅವರು, 'ಅನೇಕ ವೈದ್ಯರು ಮತ್ತೆ ಸೋಂಕು ತಗುಲಿರುವ ಪ್ರಕರಣಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ಚಾಲ್ತಿಯಲ್ಲಿದ್ದು, ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇವೆ ಎಂದು  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com