ಸೆ.21ರಿಂದ 9ರಿಂದ 12ನೇ ತರಗತಿವರೆಗೆ ಶಾಲೆಗಳು ಪುನರಾರಂಭ, ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
ಇದೇ ಸೆಪ್ಟೆಂಬರ್ 21ರಿಂದ 9ರಿಂದ 12ನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಆರೋಗ್ಯ ಸಚಿವಾಲಯ ಮಂಗಳವಾರ ಮಾರ್ಗಸೂಚಿ ಪ್ರಕಟಿಸಿದೆ.
Published: 08th September 2020 11:51 PM | Last Updated: 08th September 2020 11:51 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಇದೇ ಸೆಪ್ಟೆಂಬರ್ 21ರಿಂದ 9ರಿಂದ 12ನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಆರೋಗ್ಯ ಸಚಿವಾಲಯ ಮಂಗಳವಾರ ಮಾರ್ಗಸೂಚಿ ಪ್ರಕಟಿಸಿದೆ.
ಕೊರೋನಾ ಸೋಂಕಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ ನಿಂದೀಚೆಗೆ ದೇಶಾದ್ಯಂತ ಶಾಲೆಗಳು ಬಂದ್ ಆಗಿವೆ. ವಿದ್ಯಾರ್ಥಿಗಳು ಸುರಕ್ಷಿತವಾಗಿ ತರಗತಿಗಳಿಗೆ ದಾಖಲಾಗಲು ಮತ್ತು ಅವರ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಆರೋಗ್ಯ ಸಚಿವಾಲಯವು ಹಲವು ಆರೋಗ್ಯ ಮತ್ತು ಸುರಕ್ಷತಾ ಕ್ರಮ ಪ್ರಕಟಿಸಿದೆ.
9 ಮತ್ತು 12ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಿತವಾಗಿ ಆನ್ ಲೈನ್ ಮೂಲಕ ಅಥವಾ ನೇರವಾಗಿ ತರಗತಿಗಳಿಗೆ ಹಾಜರಾಗುವ ಮೂಲಕ ಶಿಕ್ಷಣವನ್ನು ಮುಂದುವರಿಸುವ ಆಯ್ಕೆಗಳಿವೆ.
ಶಾಲೆಗೆ ಬರುವ ಶಿಕ್ಷಕರು, ಇತರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕ. ಮಾರ್ಗಸೂಚಿ ಪ್ರಕಾರ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳ ನಡುವೆ ಆರು ಅಡಿ ಅಂತರವನ್ನು ಕಾಪಾಡಿಕೊಳ್ಳಬೇಕು. ಉಸಿರಾಟದ ಶಿಷ್ಟಾಚಾರಗಳನ್ನು ಅನುಸರಿಸುವುದು, ಆರೋಗಾ ಸೇತು ಆ್ಯಪ್ ಡೌನ್ ಲೋಡ್ ಮಾಡುವುದು ಮತ್ತು ಉಗುಳುವುದು ನಿಷೇಧಿಸುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.
ಆದಾಗ್ಯೂ, ಆನ್‌ಲೈನ್ ಮತ್ತು ದೂರಶಿಕ್ಷಣ ಮುಂದುವರಿಯುತ್ತದೆ ಮತ್ತು ಅದನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.