2024ರಲ್ಲಿ ಮತ್ತೆ ಹಿಂದುತ್ವ ಗೆಲ್ಲುತ್ತದೆ, ಸರ್ಕಾರದ ಪ್ರೋತ್ಸಾಹಕ ಪ್ಯಾಕೇಜ್ ಅಸಮರ್ಪಕ:ಸುಬ್ರಹ್ಮಣ್ಯನ್ ಸ್ವಾಮಿ

ಕೇಂದ್ರ ಸರ್ಕಾರ ಕೋವಿಡ್-19 ಹಿನ್ನೆಲೆಯಲ್ಲಿ ಘೋಷಿಸಿರುವ ಪ್ರೋತ್ಸಾಹಕ ಪ್ಯಾಕೇಜ್ ಪರಿಹಾರ ಹಣ ಅಸಮರ್ಪಕ ಎಂದು ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ಈ ಹಣದಲ್ಲಿ ಅತಿದೊಡ್ಡ ಭಾಗವು ಹಣಕಾಸಿನ ರಿಯಾಯಿತಿಯಾಗಿದೆ ಎಂದಿದ್ದಾರೆ.
ಸುಬ್ರಹ್ಮಣ್ಯನ್ ಸ್ವಾಮಿ
ಸುಬ್ರಹ್ಮಣ್ಯನ್ ಸ್ವಾಮಿ

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್-19 ಹಿನ್ನೆಲೆಯಲ್ಲಿ ಘೋಷಿಸಿರುವ ಪ್ರೋತ್ಸಾಹಕ ಪ್ಯಾಕೇಜ್ ಪರಿಹಾರ ಹಣ ಅಸಮರ್ಪಕ ಎಂದು ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ಈ ಹಣದಲ್ಲಿ ಅತಿದೊಡ್ಡ ಭಾಗವು ಹಣಕಾಸಿನ ರಿಯಾಯಿತಿಯಾಗಿದೆ ಎಂದಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಹಿಂದುತ್ವ ಗೆಲ್ಲಲಿದೆ ಎಂದು ಕೂಡ ಸುಬ್ರಹ್ಮಣ್ಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ಹಿರಿಯ ಪತ್ರಕರ್ತೆ ಕಾವೇರಿ ಬಮ್ಜೈ ಅವರೊಂದಿಗೆ ವೆಬಿನಾರ್ ಸಂವಾದ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ಹಲವು ವಿಷಯಗಳ ಕುರಿತು ಮಾತನಾಡಿದರು.

ದೇಶದ ಆರ್ಥಿಕತೆ ಬಗ್ಗೆ ಮಾತನಾಡಿದ ಅವರು, 2014-15ರ ಆರ್ಥಿಕ ಸಾಲಿನಲ್ಲಿ ನಾವು ಶೇಕಡಾ 8ರಷ್ಟು ಬೆಳವಣಿಗೆ ದರವನ್ನು ಸಾಧಿಸಿದೆವು. ನಂತರ ಪ್ರತಿವರ್ಷ ದೇಶದ ಅಭಿವೃದ್ಧಿ ದರ ಕುಂಠಿತವಾಗುತ್ತಾ ಬಂದಿತು. 2019-20ನೇ ಸಾಲಿನ ಕಳೆದ ತ್ರೈಮಾಸಿಕದಲ್ಲಿ ಅಭಿವೃದ್ಧಿ ದರ ಕೇವಲ ಶೇಕಡಾ 3.1ರಷ್ಟಾಗಿದೆ. ನಂತರ ಕೊರೋನಾ ವೈರಸ್ ಬಂದ ಮೇಲೆ ಆಗಲೇ ಕುಸಿಯುತ್ತಿದ್ದ ಆರ್ಥಿಕತೆಗೆ ಇನ್ನಷ್ಟು ಅದು ಹೊಡೆತ ನೀಡಿತು. ಲಾಕ್ ಡೌನ್ ಹೇರಿಕೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿ ವ್ಯಾಪಾರ, ವಹಿವಾಟುಗಳು ಸ್ಥಗಿತಗೊಂಡವು ಎಂದು ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 25ರಷ್ಟು ಕುಸಿಯಬಹುದು ಎಂದು ನಾನು ಅಂದುಕೊಂಡಿದ್ದೆ. ಅದು ಶೇಕಡಾ 23.9ರಷ್ಟು ಕುಸಿಯಿತು, ಕಳೆದ ನಾಲ್ಕೈದು ವರ್ಷಗಳಿಂದ ದೇಶದ ಅಭಿವೃದ್ಧಿ ದರ ಕುಸಿಯುತ್ತಿದೆ ಎಂದು ನಾನು ಹೇಳುತ್ತಿದ್ದಾಗ ಎಲ್ಲರೂ ನನ್ನನ್ನು ಬೈಯುತ್ತಿದ್ದರು. ಈ ವರ್ಷದ ಕೊನೆಗೆ ಒಟ್ಟಾರೆ ದೇಶದ ಬೆಳವಣಿಗೆ ಶೇಕಡಾ 15ರಷ್ಟಾಗಬಹುದು ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ಪ್ರೋತ್ಸಾಹಕ ಪ್ಯಾಕೆಜ್ ಬಗ್ಗೆ ಮಾತನಾಡಿದ ಸುಬ್ರಹ್ಮಣ್ಯನ್ ಸ್ವಾಮಿ, ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ. ಆದರೆ 21 ಟ್ರಿಲಿಯನ್ ಗಳಲ್ಲಿ ಕೇವಲ 1.2 ಟ್ರಿಲಿಯನ್ ಮಾತ್ರ ಪ್ರೋತ್ಸಾಹಕವಾಗಿದ್ದು ಉಳಿದವು ಹಣಕಾಸು ರಿಯಾಯಿತಿಗಳಾಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ವಿತ್ತೀಯ ಕೊರತೆಯುಂಟಾಗಿದೆ, ಅದು ನೋಟು ಅನಾಣ್ಯೀಕರಣದಿಂದ ಆಗಿದೆ. ಇದನ್ನು ತೆರಿಗೆ ಭಯೋತ್ಪಾದನೆ ಎಂದು ನಾವು ಕರೆಯಬಹುದು. ಆದಾಯ ತೆರಿಗೆ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ನಂತರ ಜಿಎಸ್ ಟಿ, ಸರ್ಕಾರ ಜನರ ಕೈಗೆ ಹಣ ಹೇಗೆ ತಲುಪಬೇಕು ಎಂಬುದರ ಬಗ್ಗೆ ಯೋಚಿಸಬೇಕು. ಪ್ರೋತ್ಸಾಹಕ ಪ್ಯಾಕೇಜ್ ಅಸಮರ್ಪಕವಾಗಿದೆ, ಅದು ಪೂರೈಕೆದಾರರನ್ನು ಆಳುತ್ತಿದೆ ಎಂದು ತಮ್ಮ ಸರ್ಕಾರವನ್ನೇ ಟೀಕಿಸಿದರು.

ಕೋವಿಡ್-19 ಸ್ಥಿತಿಗತಿಯನ್ನು ಕೇಂದ್ರ ಸರ್ಕಾರ ಚೆನ್ನಾಗಿ ನಿಭಾಯಿಸಿದೆ ಎಂದ ಸುಬ್ರಹ್ಮಣ್ಯನ್ ಸ್ವಾಮಿ, ಲಾಕ್ ಡೌನ್ ಹೇರುವ ಮುನ್ನ ಜನರಿಗೆ ತಮ್ಮ ಜೀವನಕ್ಕೆ ಬೇಕಾದದ್ದನ್ನು ತಯಾರಿ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕಾಗಿತ್ತು ಎಂದಿದ್ದಾರೆ.
ಮುಂಬರುವ ಅಮೆರಿಕ ಚುನಾವಣೆಯಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ಅವರೇ ಅಧ್ಯಕ್ಷರಾಗಬಹುದೆಂದು ನಾನು ಭಾವಿಸುತ್ತೇನೆ ಎಂದರು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರವಾಗಿ ಮಾತನಾಡಿದ ಸ್ವಾಮಿ, ಸಿಬಿಐ ತಡವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತು, ಸಾಕ್ಷಿಗಳನ್ನು ನಾಶಪಡಿಸಲು ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಸಾಂದರ್ಭಿಕ ಸಾಕ್ಷಿಗಳ ಆಧಾರದ ಮೇಲೆ ಕೇಸು ವಿಚಾರಣೆ ಮುಂದುವರಿಸಬೇಕಷ್ಟೆ ಎಂದರು.

2024ರ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವ ಗೆಲ್ಲುತ್ತದೆ. 2014, 2019ರಲ್ಲಿ ಕೂಡ ಹಿಂದುತ್ವ ಗೆದ್ದಿತು. ಮೋದಿಯವರನ್ನು ಪ್ರಧಾನಿಯಾಗಿ ನಾವು ಸ್ವೀಕರಿಸಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com