ಡಿಸಿಜಿಐ ಆದೇಶವನ್ನು ಪಾಲಿಸುತ್ತೇವೆ:ಶೋಕಾಸ್ ನೊಟೀಸ್ ಗೆ ಸೆರಂ ಇನ್ಸ್ ಟಿಟ್ಯೂಟ್ ಪ್ರತಿಕ್ರಿಯೆ

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ದ ಆದೇಶ, ಸೂಚನೆಗಳಿಗೆ ಬದ್ಧವಾಗಿರುವುದಾಗಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಫಾರ್ಮಾ ಕಂಪೆನಿ ಪ್ರತಿಕ್ರಿಯೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ದ ಆದೇಶ, ಸೂಚನೆಗಳಿಗೆ ಬದ್ಧವಾಗಿರುವುದಾಗಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಫಾರ್ಮಾ ಕಂಪೆನಿ ಪ್ರತಿಕ್ರಿಯೆ ನೀಡಿದೆ.

ನಿನ್ನೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಶೋಕಾಸ್ ನೊಟೀಸ್ ಬಂದ ತಕ್ಷಣವೇ ಪ್ರತಿಕ್ರಿಯಿಸಿರುವ ಕಂಪೆನಿ, ಉನ್ನತ ಡ್ರಗ್ ಪ್ರಾಧಿಕಾರದ ಆದೇಶವನ್ನು ಪಾಲಿಸುವುದಾಗಿ ಹೇಳಿದೆ. ಲಸಿಕೆಯ ಪ್ರಯೋಗವನ್ನು ನಿಲ್ಲಿಸುವಂತೆ ತಮಗೆ ಈ ಹಿಂದೆ ಸೂಚನೆ ಬಂದಿರಲಿಲ್ಲ ಎಂದು ಹೇಳಿದೆ.

ನಾವು ಡಿಸಿಜಿಐ ಆದೇಶವನ್ನು ಪಾಲಿಸುತ್ತೇವೆ, ನಮಗೆ ಪ್ರಯೋಗವನ್ನು ತಡೆಹಿಡಿಯುವಂತೆ ಸೂಚನೆ ಬಂದಿರಲಿಲ್ಲ. ಡಿಸಿಜಿಐ ಸುರಕ್ಷತೆ ದೃಷ್ಟಿಯಿಂದ ಇದನ್ನು ಹೇಳುವುದಾದರೆ ಅವರ ಸೂಚನೆಯನ್ನು ನಾವು ಪಾಲಿಸುತ್ತೇವೆ, ಗುಣಮಟ್ಟದ ಶಿಷ್ಟಾಚಾರವನ್ನು ಅನುಸರಿಸುತ್ತೇವೆ ಎಂದು ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರೊಂದಿಗೆ ಸೇರಿ ಅಸ್ಟ್ರಾ ಝೆನಕಾ ಎಂಬ ಡ್ರಗ್ ಕಂಪೆನಿ ಕೋವಿಡ್-19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಿ ಅದನ್ನು ಪ್ರಯೋಗಿಸಿದ ವೇಳೆ ಸ್ವಯಂಸೇವಕರೊಬ್ಬರಲ್ಲಿ ವಿಚಿತ್ರ ಕಾಯಿಲೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಯೋಗವನ್ನು ನಿಲ್ಲಿಸಿದೆ. ಈ ಬೆಳವಣಿಗೆ ನಂತರ ಅಮೆರಿಕ, ಇಂಗ್ಲೆಂಡ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಸಹ ಕೋವಿಡ್-19 ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡ ಪ್ರಯೋಗ ತಡೆಹಿಡಿಯುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಡಾ ವಿ ಜಿ ಸೊಮನಿ ಸೆರಂ ಇನ್ಸ್ ಟಿಟ್ಯೂಟ್ ಗೆ ನೊಟೀಸ್ ಜಾರಿ ಮಾಡಿದ್ದರು.

ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ ಕಳೆದ ಆಗಸ್ಟ್ 2ರಂದು ಸೆರಂ ಇನ್ಸ್ ಟಿಟ್ಯೂಟ್ ಗೆ ಸುರಕ್ಷಿತ ಕ್ರಮಗಳೊಂದಿಗೆ ಕೋವಿಶೀಲ್ಡ್ ಕೊರೋನಾ ವೈರಸ್ ಲಸಿಕೆ ಕಂಡುಹಿಡಿಯಲು ಎರಡು ಮತ್ತು ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನೀಡಿತ್ತು. ಸೆರಂ ಇನ್ಸ್ ಟಿಟ್ಯೂಟ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾ ಝೆನಕಾ ಕಂಪೆನಿಯ ಸಹಯೋಗದೊಂದಿಗೆ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com