ಕಾಂಗ್ರೆಸ್ ಗೆ ಆಂತರಿಕ ಹೊಸ ರೂಪ ನೀಡುವ ಮೂಲಕ ರಾಹುಲ್ ಸ್ಥಾನ ದೃಢಪಡಿಸಿದ ಸೋನಿಯಾ ಗಾಂಧಿ 

ಕಾಂಗ್ರೆಸ್ ಪಕ್ಷದಲ್ಲಿ ಪತ್ರ ಪ್ರಹಸನ ನಡೆದ ಬಳಿಕ ಅಳೆದುತೂಗಿ ಕಾಂಗ್ರೆಸ್ ನ ಪ್ರಮುಖ ಸ್ಥಾನಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಮೂಲಕ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರ ಸ್ಥಾನವನ್ನು ಮತ್ತೊಮ್ಮೆ ದೃಢೀಕರಿಸಿದ್ದಾರೆ. 
ಸೋನಿಯಾನಿಯಾ ಗಾಂಧಿ, ರಾಹುಲ್ ಗಾಂಧಿ
ಸೋನಿಯಾನಿಯಾ ಗಾಂಧಿ, ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಪತ್ರ ಪ್ರಹಸನ ನಡೆದ ಬಳಿಕ ಅಳೆದುತೂಗಿ ಕಾಂಗ್ರೆಸ್ ನ ಪ್ರಮುಖ ಸ್ಥಾನಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಮೂಲಕ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರ ಸ್ಥಾನವನ್ನು ಮತ್ತೊಮ್ಮೆ ದೃಢೀಕರಿಸಿದ್ದಾರೆ. 

ಈ ಹೊಸ ಬದಲಾವಣೆಗಳನ್ನು ಹೊಸ ಪೀಳಿಗೆಗೆ ಕಾಂಗ್ರೆಸ್ ನ ಹೊರಳುವಿಕೆಯನ್ನು ಸೂಚಿಸುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಪಕ್ಷದ ಸಂಘಟನಾ ರಚನೆಯಲ್ಲಿ ಬದಲಾವಣೆಗೊಂಡು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯಿಂದ ಹಿಡಿದು ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷರಿಗೆ ಸಲಹೆ ನೀಡುವ ಸಮಿತಿಯವರೆಗೂ ಹೊಸದಾಗಿ ನೇಮಕಗೊಂಡಿರುವವರ ಪೈಕಿ ಬಹುತೇಕ ಮಂದಿ ರಾಹುಲ್ ಗಾಂಧಿ ಅವರ ಆಪ್ತರೇ ಇದ್ದು, ರಾಹುಲ್ ಗಾಂಧಿ ಮತ್ತೊಮ್ಮೆ ಪಕ್ಷದ ಸಾರಥ್ಯ ವಹಿಸುವುದು ಸ್ಪಷ್ಟವಾಗುತ್ತಿದೆ. 

ಇದೇ ವೇಳೆ ಸಿಡಬ್ಲ್ಯುಸಿಗೆ ಚುನಾವಣೆ ನಡೆಯಬೇಕು ಹಾಗೂ ಸಂಘಟನಾತ್ಮಕ ಬದಲಾವಣೆಗಳಾಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದವರಿಗೂ "ಹೈಕಮಾಂಡ್ ಒತ್ತಡಕ್ಕೆ ಮಣಿಯುವುದಿಲ್ಲ ಅಥವಾ ಒತ್ತಡದಲ್ಲಿ ಕೆಲಸ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಲಾಗಿದೆ. 

ಪತ್ರ ಬರೆದಿದ್ದ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಗುಲಾಮ್ ನಭಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಶಶಿ ತರೂರ್, ಮನೀಷ್ ತಿವಾರಿಗಳನ್ನು ಆಯಕಟ್ಟಿನ ಸ್ಥಾನಗಳಿಂದ ದೂರ ಇಡಲಾಗಿದ್ದರೆ, ಈ ಗುಂಪಿನ ಮುಕುಲ್ ವಾಸ್ನಿಕ್ ಅವರನ್ನು ಮುಂದಿನ ಎಐಸಿಸಿ ಅಧಿವೇಶನ ನಡೆಯುವವರೆಗೂ ಕಾಂಗ್ರೆಸ್ ಅಧ್ಯಕ್ಷರಿಗೆ ನೆರವಾಗುವ 6 ಸದಸ್ಯರ ಸಮಿತಿಗೆ ನೇಮಕ ಮಾಡಲಾಗಿದೆ. 

ಸಿಡಬ್ಲ್ಯುಸಿಗೆ ಶಾಶ್ವತ ಆಹ್ವಾನಿತರನ್ನಾಗಿ ನೇಮಕ ಮಾಡಲಾಗಿರುವ 26 ಮಂದಿ ಪೈಕಿ 11 ಮಂದಿ, ಸಿಡಬ್ಲ್ಯುಸಿಯ ನಿಯಮಿತ 22 ಮಂದಿ ಪೈಕಿ ಕೆಸಿ ವೇಣುಗೋಪಾಲ್, ರಣ್ದೀಪ್ ಸುರ್ಜೆವಾಲ, ಅಜಯ್ ಮಕೇನ್,ಜಿತೇಂದ್ರ ಸಿಂಗ್, ಅರ್ ಎಸ್ ಮೀನಾ ಅವರು ರಾಹುಲ್ ಗಾಂಧಿಗೆ ನೆರವಾಗಲಿದ್ದಾರೆ. 

ಯುವ ನಾಯಕರು ಹಾಗೂ ಪಕ್ಷದ ಅನುಭವಿಗಳನ್ನು ಆಯಕಟ್ಟಿನ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೇರುವುದಕ್ಕೆ ಅಗತ್ಯವಿರುವ ವೇದಿಕೆ ಸಜ್ಜುಗೊಳಿಸಿದ್ದಾರೆ ಎಂದೇ ಕಾಂಗ್ರೆಸ್ ನ ಹೊಸ ಸಂಘಟನಾತ್ಮಕ ಬದಲಾವಣೆಯನ್ನು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com