ಸಂಸತ್ ಮುಂಗಾರು ಅಧಿವೇಶನ: ಲೋಕಸಭೆ ಕಲಾಪ ಆರಂಭ: ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯಕ್ಕೆ ವಿಪಕ್ಷಗಳ ತೀವ್ರ ಖಂಡನೆ
ಮಹಾಮಾರಿ ಕೊರೋನಾ ವೈರಸ್ ಅಬ್ಬರದ ನಡುವೆಯೇ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಿ ತೀವ್ರವಾಗಿ ಕಿಡಿಕಾರುತ್ತಿದ್ದಾರೆ.
Published: 14th September 2020 11:15 AM | Last Updated: 14th September 2020 11:15 AM | A+A A-

ಲೋಕಸಭೆ
ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಅಬ್ಬರದ ನಡುವೆಯೇ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಿ ತೀವ್ರವಾಗಿ ಕಿಡಿಕಾರುತ್ತಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಗೆ ಲೋಕಸಭೆಯಲ್ಲಿ ಕಲಾಪ ಆರಂಭಿಸಲಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ಇತ್ತೀಚೆಗೆ ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಇತರೆ ಗಣ್ಯಾತಿಗಣ್ಯರಿಗೆ ಸದನದಲ್ಲಿ ಸದಸ್ಯರು ಗೌರವ ಸಂತಾಪ ಸೂಚಿಸಿದರು. ಬಳಿಕ ಕಲಾಪವನ್ನು ಒಂದು ಗಂಟೆಗಳ ಕಾಲ ಮುಂದೂಡಲಾಯಿತು.
ಇದೀಗ ಮತ್ತೆ ಕಲಾಪವನ್ನು ಆರಂಭಿಸಲಾಗಿದ್ದು, ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯ ಕುರಿತು ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಲೋಕಸಭಾ ಕಾಂಗ್ರೆಸ್ ಸಂಸದ ಅಧಿರ್ ರಂಜನ್ ಚೌಧರಿಯವರು ಮಾತನಾಡಿ, ಪ್ರಶೋತ್ತರ ಅವಧಿ ಗೋಲ್ಡನ್ ಅವಧಿ ಇದ್ದಂತೆ. ಆದರೆ, ನೀವು ಪರಿಸ್ಥಿತಿಯ ಕಾರಣ ನೀಡಿ ಈ ಅವಧಿಯನ್ನು ಮೊಟಕುಗೊಳಿಸಿರುವುದಾಗಿ ಹೇಳುತ್ತಿದ್ದೀರಿ. ಕಲಾಪವನ್ನು ನಡೆಸಿ. ಆದರೆ, ಪ್ರಶ್ನೋತ್ತರ ಅವಧಿಗೂ ಅವಕಾಶ ನೀಡಿ. ಪ್ರಶ್ನೋತ್ತರ ಹಾಗೂ ಶೂನ್ಯ ಅವಧಿಯನ್ನು ರದ್ದುಗೊಳಿಸುವ ಮೂಲಕ ನೀವು ಪ್ರಜಾಪ್ರಭುತ್ವದ ಕತ್ತುಹಿಸುಕುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಲೋಕಸಭಾ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಯವರು. ಇದೊಂದು ಅಸಾಧಾರಣ ಪರಿಸ್ಥಿತಿಯಾಗಿದ್ದು, ಉಭಯ ಸದನಗಳನ್ನು ಒಮ್ಮೆಲೆ ಕಾರ್ಯ ನಡೆಸಲು ಸಾಧ್ಯವಾಗದ ಸಂದರ್ಭದಲ್ಲಿಯೂ ನಾವಿಲ್ಲಿ ಸುಮಾರು 800-850 ಸಂಸದರು ಒಟ್ಟಿಗೆ ಭೇಟಿಯಾಗಿದ್ದೇವೆ. ಸರ್ಕಾರವನ್ನು ಪ್ರಶ್ನಿಸಲು ಹಲವು ಮಾರ್ಗಗಳಿವೆ. ಸರ್ಕಾರ ಯಾವುದೇ ಚರ್ಚೆಗಳಿಂದಲೂ ಓಡಿ ಹೋಗುತ್ತಿಲ್ಲ. ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ.