ಪ್ರಯಾಣಿಕರಲ್ಲಿ ಕೊರೋನಾ ಪಾಸಿಟಿವ್: ಅ.2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹಾರಾಟ ರದ್ದು
ಕೋವಿಡ್-19 ಸೋಂಕಿಗೊಳಗಾಗಿದ್ದ ಪ್ರಯಾಣಿಕರನ್ನು ಕರೆತಂದಿದ್ದರಿಂದ ಇನ್ನು 15 ದಿನಗಳವರೆಗೆ ಅಂದರೆ ಅಕ್ಟೋಬರ್ 2ರವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರವನ್ನು ದುಬೈ ವಿಮಾನಯಾನ ಪ್ರಾಧಿಕಾರ ರದ್ದುಗೊಳಿಸಿದೆ.
Published: 18th September 2020 02:26 PM | Last Updated: 18th September 2020 02:29 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ:ಕೋವಿಡ್-19 ಸೋಂಕಿಗೊಳಗಾಗಿದ್ದ ಪ್ರಯಾಣಿಕರನ್ನು ಹೊತ್ತೊಯ್ದಿದ್ದರಿಂದ ಇನ್ನು 15 ದಿನಗಳವರೆಗೆ ಅಂದರೆ ಅಕ್ಟೋಬರ್ 2ರವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರವನ್ನು ದುಬೈ ವಿಮಾನಯಾನ ಪ್ರಾಧಿಕಾರ ರದ್ದುಗೊಳಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ನಿಯಮ ಪ್ರಕಾರ, ಭಾರತದಿಂದ ದುಬೈಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಮೂಲ ಕೊರೋನಾ ನೆಗೆಟಿವ್ ಪ್ರಮಾಣಪತ್ರವನ್ನು ಪ್ರಯಾಣಕ್ಕೆ 96 ಗಂಟೆ ಮೊದಲು ಸಲ್ಲಿಸಬೇಕು. ಆದರೆ ಕಳೆದ ಸೆಪ್ಟೆಂಬರ್ 2ರಂದು ಕೊರೋನಾ ಪಾಸಿಟಿವ್ ಸರ್ಟಿಫಿಕೇಟ್ ಪಡೆದಿದ್ದ ಪ್ರಯಾಣಿಕ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಜೈಪುರ-ದುಬೈ ವಿಮಾನದಲ್ಲಿ ಸೆಪ್ಟೆಂಬರ್ 4ರಂದು ಸಂಚಾರ ನಡೆಸಿದ್ದರು. ಅದಕ್ಕೂ ಮೊದಲು ಕೊರೋನಾ ಪಾಸಿಟಿವ್ ಹೊಂದಿದ್ದ ಮತ್ತೊಬ್ಬ ಪ್ರಯಾಣಿಕ ಕೂಡ ದುಬೈಗೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮತ್ತೆ ಅಂತಹ ಘಟನೆ ಮರುಕಳಿಸದಂತೆ, ಕೊರೋನಾದಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಅಲ್ಲಿನ ವಿಮಾನಯಾನ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ವಿಚಾರಿಸಿದಾಗ, ಪ್ರಯಾಣಿಕರ ಕಷ್ಟವನ್ನು ನಿವಾರಿಸಲು ದುಬೈಗೆ ಹಾರಾಟ ನಡೆಸುತ್ತಿದ್ದ 4 ವಿಮಾನಗಳನ್ನು ಇಂದಿನಿಂದ 15 ದಿನಗಳ ಕಾಲ ಶಾರ್ಜಾಗೆ ಕಳುಹಿಸಲಾಗುವುದು ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ತಿಳಿಸಿದೆ.