ಕೋವಿಡ್-19 ಬಿಕ್ಕಟ್ಟು: ಸಂಸತ್ ಅಧಿವೇಶನ ಅರ್ಧಕ್ಕೆ ಮೊಟಕುಗೊಳಿಸಲು ಬಹುತೇಕ ಪಕ್ಷಗಳ ಒಪ್ಪಿಗೆ
ಕೇಂದ್ರ ಸರ್ಕಾರದ ಕೆಲ ಸಚಿವರು ಹಾಗೂ ಸಂಸದರಿಗೆ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರದ ಮಧ್ಯಭಾಗದಲ್ಲಿ ಸಂಸತ್ ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸುವ ಸಾಧ್ಯತೆಯಿರುವುದಾಗಿ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
Published: 19th September 2020 07:26 PM | Last Updated: 19th September 2020 07:31 PM | A+A A-

ಸಂಸತ್
ನವದೆಹಲಿ: ಕೇಂದ್ರ ಸರ್ಕಾರದ ಕೆಲ ಸಚಿವರು ಹಾಗೂ ಸಂಸದರಿಗೆ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರದ ಮಧ್ಯಭಾಗದಲ್ಲಿ ಸಂಸತ್ ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸುವ ಸಾಧ್ಯತೆಯಿರುವುದಾಗಿ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಲೋಕಸಭೆ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಅನೇಕ ರಾಜಕೀಯ ಪಕ್ಷಗಳು ಸೆಪ್ಟೆಂಬರ್ 14ರಿಂದ ಆರಂಭವಾಗಿರುವ ಅಧಿವೇಶನವನ್ನು ಮೊಟಕುಗೊಳಿಸಲು ಒಪ್ಪಿಗೆ ಸೂಚಿಸಿವೆ.
ಈ ಸಂಬಂಧ ಸಂಸದೀಯ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗಳನ್ನು ಬದಲಿಸಲು ಲೋಕಸಭೆ ಈವರೆಗೆ ಮೂರು ಮಸೂದೆಗಳನ್ನು ಅಂಗೀಕರಿಸಿದೆ.
ಅಲ್ಲದೆ, ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಹಣವನ್ನು ಹೆಚ್ಚಿಸಲು ಸಂಸದರ ಸಂಬಳವನ್ನು ಶೇಕಡಾ 30 ರಷ್ಟು ಕಡಿತಗೊಳಿಸುವ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಯನ್ನು ಉಭಯ ಸದನಗಳು ಅಂಗೀಕರಿಸಿವೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಪಟೇಲ್ ಸೇರಿದಂತೆ ಕೆಲ ಸಂಸದರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟ ನಂತರ ಕೆಲ ಪ್ರತಿಪಕ್ಷಗಳು, ಅಧಿವೇಶನವನ್ನು ಮೊಟಕುಗೊಳಿಸಲು ಸರ್ಕಾರವನ್ನು ಮನವೊಲಿಸುವ ಪ್ರಯತ್ನ ನಡೆಸಿವೆ. ನಂತರ ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಸಂಸತ್ ಆವರಣದಲ್ಲಿ ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಆವರಣ ಪ್ರವೇಶಿಸುವ ಸಂಸತ್ ಸಿಬ್ಬಂದಿ ಹಾಗೂ ವರದಿಗಾರರಿಗೆ ರಾಪಿಡ್ ಅಂಟಿಜೆನ್ ಟೆಸ್ಟ್ ಕಡ್ಡಾಯಪಡಿಸಲಾಗಿದೆ. ಅದಲ್ಲದೇ, ಉಭಯ ಸದನಗಳ ಸದಸ್ಯರಿಗೆ ನಿಯಮಿತವಾಗಿ ಆರ್ ಟಿ- ಪಿಸಿಆರ್ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಹಿರಿಯ ಸಂಸತ್ ಅಧಿಕಾರಿಯೊಬ್ಬರು ಹೇಳಿದ್ದಾರೆ.