ಎಸ್ ಪಿಬಿ ನಿಧನಕ್ಕೆ ಸಿಎಂ ಬಿಎಸ್ ವೈ ಸೇರಿದಂತೆ ಗಣ್ಯರ ಸಂತಾಪ

ಖ್ಯಾತ ಗಾಯಕ ನಟ, ಸಂಗೀತ ನಿರ್ದೇಶಕ ಎಸ್.ಪಿ.ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವು ಗಣ್ಯರು  ಸಂತಾಪ ಸೂಚಿಸಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ
ಎಸ್.ಪಿ.ಬಾಲಸುಬ್ರಹ್ಮಣ್ಯಂ

ಬೆಂಗಳೂರು: ಖ್ಯಾತ ಗಾಯಕ ನಟ, ಸಂಗೀತ ನಿರ್ದೇಶಕ ಎಸ್.ಪಿ.ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವು ಗಣ್ಯರು  ಸಂತಾಪ ಸೂಚಿಸಿದ್ದಾರೆ.

ಬಾಲು ನಿಧನ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, 'ತಮ್ಮ ಅಸಾಧಾರಣ ಕಂಠಸಿರಿಯಿಂದ ವಿಶ್ವದಾದ್ಯಂತ ಸಂಗೀತಪ್ರಿಯರ ಮನೆಮನಗಳಲ್ಲಿ ಸ್ಥಾನಪಡೆದ ಗಾನಗಂಧರ್ವ, ಭಾರತದ ಹೆಮ್ಮೆ, ಪದ್ಮಭೂಷಣ ಡಾ ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿಧಿವಶರಾಗಿರುವುದು ಇಡೀ ಭಾರತೀಯ ಕಲಾಲೋಕಕ್ಕೆ ಎಂದೂ ತುಂಬಲಾಗದ ನಷ್ಟ. ಅಕ್ಷರಗಳಲ್ಲಿ ಹಿಡಿದಿಡಲಾಗದಷ್ಟು ಸಾಧನೆ ಮಾಡಿದ್ದ ಎಸ್.ಪಿ.ಬಿ ತಮ್ಮ ಗೀತೆಗಳ ಮೂಲಕ ಅಮರರಾಗಿದ್ದಾರೆ. ಮುಂದಿನ ಜನ್ಮ ಅನ್ನೋದು ಇದ್ದರೆ ಕನ್ನಡನಾಡಲ್ಲೇ ಕನ್ನಡಿಗನಾಗಿ ಹುಟ್ಟಿ ಋಣ ತೀರಿಸುವೆ' ಎಂದು ಕನ್ನಡಿಗರ ಮೇಲಿನ ತಮ್ಮ ಪ್ರೀತಿ ಅಭಿಮಾನಗಳನ್ನು ವ್ಯಕ್ತಪಡಿಸುತ್ತಿದ್ದ ಎಸ್.ಪಿ.ಬಿ ನಿಧನಕ್ಕೆ ಇಡೀ ನಾಡು ಕಂಬನಿ ಮಿಡಿಯುತ್ತಿದೆ. ಸರಿಸಾಟಿಯಿಲ್ಲದ ಆ ಮಹಾನ್ ಗಾಯಕನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಅವರ ಅಭಿಮಾನಿಗಳಲ್ಲಿ ಒಬ್ಬನಾಗಿ ಪ್ರಾರ್ಥಿಸುತ್ತಾ, ಆ ಮಹಾನ್ ಸಾಧಕನಿಗೆ ನನ್ನ ನುಡಿನಮನಗಳನ್ನು ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಎಸ್ ಪಿ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕಂಬನಿ ಮಿಡಿದಿದ್ದು, ಎಸ್ ಪಿಬಿ ಸಾವು ಆಘಾತ ತಂದಿದೆ. ಅವರ ಸಾವಿನಿಂದಾಗಿ ಸಂಗೀತ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಶಿವರಾಜ್ ಸಿಂಗ್ ಚೌಹ್ವಾಣ್ ಅವರೂ ಕೂಡ ಟ್ವೀಟ್ ಮಾಡಿದ್ದು, ಬಾಲು ಕುಟುಂಬಸ್ಥರಿಗೆ ಆ ದೇವರು ದುಃಖ ತಡೆಯುವ ಶಕ್ತಿ ನೀಡಲಿ. ಬಾಲ ಸುಬ್ರಮಣ್ಯಂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, 'ಹಲವು ಭಾಷೆಗಳ ಚಿತ್ರಗಳಲ್ಲಿ ಹಾಡಿ, ದಶಕಗಳ ಕಾಲ ನಮ್ಮೆಲ್ಲರನ್ನು ರಂಜಿಸಿದ್ದ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಿಬಾರದ ನಷ್ಟ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ದಿನೇಶ್ ಗುಂಡೂರಾವ್ ಅವರು ಕೂಡ ಟ್ವೀಟ್ ಮಾಡಿದ್ದು, ಸಂಗೀತ ಲೋಕದ ಸ್ವರಮಾಂತ್ರಿಕ, 50 ವರ್ಷಗಳಿಗೂ ಹೆಚ್ಚಿನ ಕಾಲ ಬಹುಭಾಷಾ ಗಾಯಕನಾಗಿ ಅಭಿಮಾನಿಗಳನ್ನು ರಂಜಿಸಿದ ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ನಮ್ಮನಗಲಿ ಹೋಗಿರುವುದು ಅತ್ಯಂತ ದುಃಖದ ವಿಚಾರ. ಕೊನೆಗೂ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲೇ ಇಲ್ಲ. 'ಎಸ್ ಪಿಬಿ' ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com