ಮೇಘಾಲಯದಲ್ಲಿ ಭೀಕರ ಭೂಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ದಾರುಣ ಸಾವು, ಹಲವರು ನಾಪತ್ತೆ

ಮೇಘಾಲಯದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರು ಸಾವನ್ನಪ್ಪಿದ್ದು, ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ.
ಮೇಘಾಲಯ ಭೂಕುಸಿತ
ಮೇಘಾಲಯ ಭೂಕುಸಿತ

ಶಿಲ್ಲಾಂಗ್:  ಮೇಘಾಲಯದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರು ಸಾವನ್ನಪ್ಪಿದ್ದು, ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ.

ಮೇಘಾಲಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈಸ್ಟ್ ಕಾಶಿ ಹಿಲ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳಾ ಆಟಗಾರ್ತಿ ಸಾವನ್ನಪ್ಪಿ ಹಲವರು ನಾಪತ್ತೆಯಾಗಿದ್ದಾರೆ.

ಮೃತ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ರಜಿಯಾ ಅಹ್ಮದ್ (30 ವರ್ಷ) ಎಂದು ಗುರುತಿಸಲಾಗಿದ್ದು, ರಜಿಯಾ ಅಹ್ಮದ್ ಮೇಘಲಾಯ ರಾಜ್ಯವನ್ನು ಹಲವು ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದಾರೆ. ಇದೀಗ ಅವಶೇಷಗಳಡಿಯಲ್ಲಿ ರಜಿಯಾ ಅಹ್ಮದ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತಂತೆ ಈಸ್ಟ್ ಕಾಶಿ ಹಿಲ್ ಜಿಲ್ಲೆಯ ಎಸ್ ಪಿ ಸಿಲ್ವೆಸ್ಟರ್ ನಾಂಗ್ಟಿಂಗರ್  ಅವರು ಮಾಹಿತಿ ನೀಡಿದ್ದು,  ಪೊಲೀಸ್ ಮತ್ತು ಹೋಮ್ ಗಾರ್ಡ್ ತಂಡ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಹಿಳೆಯ ದೇಹ ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ.

ಮೇಘಾಲಯ ಕ್ರಿಕೆಟ್ ಸಂಘದ ಪ್ರಧಾನ ಕಾರ್ಯದರ್ಶಿ ಗಿಡಿಯಾನ್ ಖಾರ್ಕೊಂಗೋರ್ ಅವರು ಮಾತನಾಡಿದ್ದು, ಭೂಕುಸಿತದಲ್ಲಿ ಸಾವನ್ನಪ್ಪಿದ ರಜಿಯಾ ಅಹ್ಮದ್ ಅವರು 2011-12 ರಿಂದ ವಿವಿಧ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು ರಜಿಯಾ ಸಾವಿಗೆ ಮೇಘಾಲಯ ಕ್ರಿಕೆಟ್ ತಂಡದ ಸಹ ಆಟಗಾರರು ಸಂತಾಪ ಸೂಚಿಸಿದ್ದಾರೆ. ರಜಿಯಾ ಸಾವು ಆಘಾತ ತಂದಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಹ ಆಟಗಾರ್ತಿ ಕಕೋಲಿ ಚಕ್ರವರ್ತಿ ಹೇಳಿದ್ದಾರೆ. 

ಇನ್ನು ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಮೇಘಾಲಯದಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ರಾಜಧಾನಿ ಶಿಲ್ಲಾಂಗ್ ನ ಹಲವು ಪ್ರಮುಖ ಪ್ರದೇಶಗಳೇ ಜಲಾವೃತ್ತವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com