ವೇಶ್ಯಾವಾಟಿಕೆ ಅಪರಾಧವಲ್ಲ: ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು

ವಯಸ್ಕ ಮಹಿಳೆಗೆ ತನ್ನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದ್ದು. ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್

ಮುಂಬೈ:  ವಯಸ್ಕ ಮಹಿಳೆಗೆ ತನ್ನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದ್ದು. ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಮುಂಬೈನಲ್ಲಿ ಬಂಧನಕ್ಕೊಳಗಾಗಿರುವ ಮೂವರು ಮಹಿಳಾ ಲೈಂಗಿಕ ಕಾರ್ಯಕರ್ತೆಯರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ನ ನ್ಯಾಯಮೂರ್ತಿ ಪೃಥ್ವಿರಾಜ್ ಚೌಹಾಣ್‌ ಅವರ ನೇತೃತ್ವದ ನ್ಯಾಯಪೀಠ, 'ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ ಮತ್ತು ವಯಸ್ಕ ಮಹಿಳೆಗೆ ತನ್ನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. 1956ರ ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ವೇಶ್ಯಾವಾಟಿಕೆಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೂವರು ಮಹಿಳೆಯರು ವಯಸ್ಕರಾಗಿದ್ದಾರೆ. ಅವರು ಇಚ್ಚಿಸಿದಂತೆ ಬದುಕಲು, ಅವರು ಇಷ್ಟಪಟ್ಟ ವೃತ್ತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಿದ್ದಾರೆ. ಸ್ವತಃ ವೇಶ್ಯಾವಾಟಿಕೆ ಅಪರಾಧವಲ್ಲ. ಮತ್ತು ಶಿಕ್ಷೆಗೂ ಒಳಗಾಗುವುದಿಲ್ಲ. ಆದರೆ, ಅದರ ಸಾರ್ವಜನಿಕ ಒತ್ತಾಯವು ಕಾಯಿದೆಯಡಿ ಅಪರಾಧವೆನಿಸಿಕೊಂಡಿದೆ. ವಾಣಿಜ್ಯ ಉದ್ದೇಶಕ್ಕಾಗಿ ವ್ಯಕ್ತಿಯನ್ನು ಲೈಂಗಿಕ ಶೋಷಣೆಗೆ ತಳ್ಳುವುದು, ನಿಂದಿಸುವುದು ಮತ್ತು ಅದನ್ನೇ ಜೀವನೋಪಾಯವನ್ನಾಗಿ ಮಾಡಿಕೊಳ್ಳುವುದು 1956ರ ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಅಪರಾಧವೆನಿಸಿಕೊಂಡಿದೆ. ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೆ, ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುತ್ತಿದ್ದರೆ, ಪ್ರಲೋಭನೆಗೆ ಒಳಪಡಿಸುತ್ತಿದ್ದರೆ ಅದೂ ಕೂಡ ಅಪರಾಧವೆನಿಸಿಕೊಳ್ಳುತ್ತದೆ ಎಂದು ಕೋರ್ಟ್‌ ಸ್ಪಷ್ಟ ಪಡಿಸಿದೆ.

ಅರ್ಜಿದಾರರು (ಬಂಧಿತ ಮೂವರು ಮಹಿಳೆಯರು) ವೇಶ್ಯಾವಾಟಿಕೆ ಉದ್ದೇಶದಿಂದ ಯಾವುದೇ ವ್ಯಕ್ತಿಯನ್ನು ಪ್ರಲೋಭನೆಗೆ ಒಳಪಡಿಸಿರುವುದಕ್ಕೆ ಅಥವಾ ಅವರು ವೇಶ್ಯಾಗೃಹವನ್ನು ನಡೆಸುತ್ತಿರುವುದಕ್ಕೆ ಈ ಪ್ರಕರಣದಲ್ಲಿ ದಾಖಲೆಗಳೇ ಇಲ್ಲ. ಹೀಗಾಗಿ ಕೂಡಲೇ ಬಂಧಿತ ಮಹಿಳೆಯರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.

ಏನಿದು ಪ್ರಕರಣ?
ಕಳೆದ ವರ್ಷ, ಮಲಾಡ್ ಎಂಬಲ್ಲಿನ ಅತಿಥಿಗೃಹದ ಮೇಲೆ ದಾಳಿ ನಡೆಸಿದ್ದ ಪೊಲೀಸರು 20 ವರ್ಷ ವಯಸ್ಸಿನ ಮೂವರು ಮಹಿಳೆಯರನ್ನು ವೇಶ್ಯಾವಾಟಿಕೆ ಆರೋಪದ ಅಡಿಯಲ್ಲಿ ವಶಕ್ಕೆ ಪಡೆದಿದ್ದರು. ಅಲ್ಲದೆ, ಮಧ್ಯವರ್ತಿಯೊಬ್ಬನನ್ನು ಪೊಲೀಸರು ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದರು. ಮಜಗಾಂವ್‌ ಮೆಟ್ರೋ ಪಾಲಿಟನ್‌ ನ್ಯಾಯಾಲಯವು ಮೂವರು ಮಹಿಳೆಯರ ಬಂಧನವನ್ನು ಎತ್ತಿ ಹಿಡಿದಿತ್ತು. ಇಚ್ಛೆಗೆ ವಿರುದ್ಧವಾಗಿ ತಮ್ಮನ್ನು ಬಂಧಿಸಿಡಲಾಗಿದೆ ಎಂದು ಆರೋಪಿಸಿ ಮೂವರೂ ಮಹಿಳೆಯರು ಮೆಟ್ರೊಪಾಲಿಟನ್‌ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚೌಹಾಣ್‌ ಮೇಲಿನ ಆದೇಶ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com