ಪೂರ್ವ ಲಡಾಕ್ ಸ್ಥಿತಿ ಅಹಿತಕರ; ಅಲ್ಲಿ ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ: ವಾಯುಪಡೆ ಮುಖ್ಯಸ್ಥ ಬದೌರಿಯಾ

ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ,ಅಹಿತಕರ ವಾತಾವರಣವಿದ್ದು, ಗಡಿ ವಾಸ್ತವ ರೇಖೆ(ಎಲ್ ಎಸಿ) ಬಳಿ ಯುದ್ಧವಿಲ್ಲ ಹಾಗೆಂದು ಶಾಂತಿಯೂ ಇಲ್ಲ ಎಂಬ ಪರಿಸ್ಥಿತಿಯಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ ತಿಳಿಸಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆ ಎಸ್ ಬದೌರಿಯಾ
ವಿಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆ ಎಸ್ ಬದೌರಿಯಾ

ನವದೆಹಲಿ: ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ,ಅಹಿತಕರ ವಾತಾವರಣವಿದ್ದು, ಗಡಿ ವಾಸ್ತವ ರೇಖೆ(ಎಲ್ ಎಸಿ) ಬಳಿ ಯುದ್ಧವಿಲ್ಲ ಹಾಗೆಂದು ಶಾಂತಿಯೂ ಇಲ್ಲ ಎಂಬ ಪರಿಸ್ಥಿತಿಯಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ ತಿಳಿಸಿದ್ದಾರೆ.

ಪೂರ್ವ ಲಡಾಕ್ ನ ಹಲವು ಘರ್ಷಣೆ ಕೇಂದ್ರಗಳಲ್ಲಿ ಯಥಾಸ್ಥಿತಿ ಮುಂದುವರಿದಿದ್ದು ಭಾರತೀಯ ಸೇನಾಪಡೆ ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ, ವಿಶೇಷವಾಗಿ ವಾಯುಪಡೆ ಚೀನಾದ ಸೇನಾಪಡೆಯ ಯಾವುದೇ ದುಸ್ಸಾಹಸವನ್ನು ಎದುರಿಸಲು ಬದ್ಧವಾಗಿದೆ ಮತ್ತು ಸಿದ್ದವಾಗಿದೆ ಎಂದಿದ್ದಾರೆ.

ಭವಿಷ್ಯದಲ್ಲಿ ಯಾವುದೇ ರೀತಿಯ ಸಂಘರ್ಷ ಎದುರಾದರೂ ಅವುಗಳನ್ನು ಎದುರಿಸಲು, ಗೆಲುವು ಕಾಣುವಲ್ಲಿ ಭಾರತೀಯ ವಾಯುಪಡೆಯ ಪಾತ್ರ ವಿಶೇಷ ಮಹತ್ವದ್ದಾಗಿದೆ. ವಾಯುಪಡೆಗೆ ಚಿನೂಕ್ ಮತ್ತು ಅಪಚೆ ಯುದ್ಧ ವಿಮಾನಗಳ ಜೊತೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆ ಹಲವು ಯುದ್ಧ ತಂತ್ರ ಸಾಮರ್ಥ್ಯಗಳ ಹೆಚ್ಚಿಸುವಿಕೆಗೆ ಪ್ರಮುಖ ಕಾರಣವಾಗಲಿದೆ ಮತ್ತು ಧನಾತ್ಮಕ ಅಂಶವಾಗಿರುತ್ತದೆ ಎಂದು ಹೇಳಿದ್ದಾರೆ.

ಉತ್ತರದ ಗಡಿಭಾಗದಲ್ಲಿ ಸದ್ಯದ ಪರಿಸ್ಥಿತಿ ಅತ್ಯಂಕ ಕ್ಲಿಷ್ಟವಾಗಿದೆ. ಅಲ್ಲಿ ಸದ್ಯ ಯಾವುದೇ ಯುದ್ಧ ನಡೆಯುತ್ತಿಲ್ಲ, ಜೊತೆಗೆ ಶಾಂತಿಯ ಪರಿಸ್ಥಿತಿ ಕೂಡ ಇಲ್ಲ. ರಫೇಲ್ ಮತ್ತು ಇತರ ವಿಮಾನಗಳ ಇತ್ತೀಚಿನ ಸೇರ್ಪಡೆಯು ಐಎಎಫ್‌ಗೆ ಸಾಕಷ್ಟು ಪ್ರಾಯೋಗಿಕ ಮತ್ತು ಕಾರ್ಯತಂತ್ರದ ಸಾಮರ್ಥ್ಯ ವರ್ಧನೆಯನ್ನು ಒದಗಿಸಿದೆ ಎಂದು ಏರ್ ಚೀಫ್ ಮಾರ್ಷಲ್ ಭದೌರಿಯಾ ಹೇಳಿದ್ದಾರೆ.

ಪೂರ್ವ ಲಡಾಕ್ ನಲ್ಲಿ ಟ್ಯಾಂಕ್, ಭಾರೀ ಶಸ್ತ್ರಾಸ್ತ್ರಗಳ ನಿಯೋಜನೆ: ಮುಂಬರುವ ಚಳಿಗಾಲಕ್ಕೆ ಪೂರ್ವ ಲಡಾಕ್ ನಲ್ಲಿ ಸೇನೆ ನಿಯೋಜನೆ ಬಗ್ಗೆ ಭಾರತೀಯ ಸೇನೆ ಭಾರೀ ಸಿದ್ಧತೆ ಮಾಡಿಕೊಂಡಿದೆ. ಭಾರತೀಯ ಸೇನೆಯು ಪೂರ್ವ ಲಡಾಖ್‌ನ ಎತ್ತರದ ಪ್ರದೇಶಗಳಿಗೆ ಮತ್ತು ಅಲ್ಲಿರುವ ಸೈನಿಕರಿಗೆ ಟ್ಯಾಂಕ್‌ಗಳು, ಭಾರೀ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಇಂಧನ, ಆಹಾರ ಮತ್ತು ಅಗತ್ಯ ಚಳಿಗಾಲದ ಸರಬರಾಜುಗಳನ್ನು ಪೂರೈಸಿದೆ.

ಲಡಾಖ್‌ನಲ್ಲಿ ಕೆಲವು ತಿಂಗಳುಗಳವರೆಗೆ ಚಳಿಗಾಲಕ್ಕೆ ಸೇನೆಯನ್ನು ಸಿದ್ಧಪಡಿಸುವುದು ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಸೇನೆಯಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಯುದ್ಧದ ಸನ್ನಿವೇಶಗಳು ಎದುರಾದರೆ ಅದನ್ನು ಎದುರಿಸುವುದು ಮುಖ್ಯವಾಗಿದೆ. ಮಿಲಿಟರಿ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಈ ಕಾರ್ಯಾಚರಣೆ ದಶಕಗಳಲ್ಲಿ ಅತಿದೊಡ್ಡದಾಗಿದೆ ಎಂದು ಹೇಳಲಾಗುತ್ತಿದೆ.

ಸೈನ್ಯವು ಟಿ -90 ಮತ್ತು ಟಿ -72 ಟ್ಯಾಂಕ್‌ಗಳು, ಫಿರಂಗಿ ಬಂದೂಕುಗಳು ಮತ್ತು ಕಾಲಾಳುಪಡೆ ಯುದ್ಧ ವಾಹನಗಳಲ್ಲಿ ಪೂರ್ವ ಲಡಾಖ್‌ನ ಚುಶುಲ್ ಮತ್ತು ಡೆಮ್‌ಚಾಕ್ ವಲಯಗಳು ಸೇರಿದಂತೆ ಹಲವಾರು ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜನೆಯಾಗಿದೆ.

ಸಮುದ್ರ ಮಟ್ಟದಿಂದ 16 ಸಾವಿರ ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಫಾರ್ವರ್ಡ್ ಪೋಸ್ಟ್‌ಗಳು ಮತ್ತು ಪರ್ವತ ಪ್ರದೇಶಗಳಿಗೆ ಸೇನೆಯು ದೊಡ್ಡ ಪ್ರಮಾಣದಲ್ಲಿ ಬಟ್ಟೆ, ಡೇರೆಗಳು, ಆಹಾರ ವಸ್ತುಗಳು, ಸಂವಹನ ಉಪಕರಣಗಳು, ಇಂಧನ, ಶಾಖೋತ್ಪಾದಕಗಳು ಮತ್ತು ಇತರ ಸಾಮಗ್ರಿಗಳನ್ನು ಕಳುಹಿಸಿದೆ. ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಅವರು ವೈಯಕ್ತಿಕವಾಗಿ ನೋಡಿಕೊಳ್ಳುತ್ತಿದ್ದಾರೆ.

ಇದು ಸ್ವಾತಂತ್ರ್ಯದ ನಂತರದ ಲಡಾಖ್ ನಲ್ಲಿ ಜಾರಿಗೆ ಬಂದ ಅತಿದೊಡ್ಡ ಸೇನಾ ಕಾರ್ಯಾಚರಣೆಯಾಗಿದೆ. ಇದು ಅತಿದೊಡ್ಡ ಪ್ರಮಾಣದಲ್ಲಿದೆ ಎಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com